ದುಬೈ ಅನ್ನು ಹಿಂದಿಕ್ಕಿದ ದೆಹಲಿ ವಿಮಾನ ನಿಲ್ದಾಣ: ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ!

ದೆಹಲಿ: ಜಾಗತಿಕ ಟ್ರಾವೆಲ್ ಡೇಟಾ ಪೂರೈಕೆದಾರರಾದ ಒಫೀಷಿಯಲ್ ಏರ್‌ಲೈನ್ ಗೈಡ್ ಅಧ್ಯಯನಗಳ ಪ್ರಕಾರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ(ಮಾರ್ಚ್ 2022 ರಲ್ಲಿ).

ಓಎಜಿ ಪ್ರಕಾರ ಫೆಬ್ರವರಿ 2022ರಲ್ಲಿ ಜಿ ಎಮ್ ಆರ್ ಚಾಲಿತ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿತ್ತು, ಮತ್ತು ಶ್ರೇಯಾಂಕದಲ್ಲಿ ಮುಂಬಡ್ತಿಯನ್ನು ಹೊಂದಲು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿತು. ಸಂಯುಕ್ತ ಅಮೇರಿಕಾದ ಅಟ್ಲಾಂಟಾ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೆಂದು ಶ್ರೇಯಾಂಕ ಪಡೆದಿದೆ ಮತ್ತು ಅದರ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಫೆಬ್ರವರಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ದುಬೈ ನಿಲ್ದಾಣವು ಮೂರನೇ ಸ್ಥಾನಕ್ಕೆ ಕುಸಿದಿದ್ದು, ಎರಡನೇ ಸ್ಥಾನವನ್ನು ದೆಹಲಿ ವಿಮಾನ ನಿಲ್ದಾಣ ತನ್ನದಾಗಿಸಿಕೊಂಡಿದೆ ಎಂದು ಸಂಸ್ಥೆ ವರದಿ ಮಾಡಿದೆ.

ಕೋವಿಡ್ ಸಾಂಕ್ರಾಮಿಕ ರೋಗಕ್ಕೂ ಮುನ್ನ, ಮಾರ್ಚ್ 2019 ರಲ್ಲಿ ದೆಹಲಿ ವಿಮಾನ ನಿಲ್ದಾಣವು 23 ನೇ ಸ್ಥಾನದಲ್ಲಿತ್ತು, ಮತ್ತೀಗ 3.61 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ 21 ಸ್ಥಾನಗಳನ್ನು ಜಿಗಿದು 2ನೇ ಸ್ಥಾನವನ್ನು ತಲುಪಿದೆ.