ಸಾಮಾನ್ಯ ಪಾಸ್ ಪೋರ್ಟ್ ಗಾಗಿ ರಾಹುಲ್ ಗಾಂಧಿಗೆ ಎನ್.ಒ.ಸಿ ನೀಡಿದ ದೆಹಲಿ ನ್ಯಾಯಾಲಯ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಿದ್ದು, ಹತ್ತು ವರ್ಷ ಕಾಲಾವಧಿಗೆ ಹೊಸ ಪಾಸ್ ಪೋರ್ಟ್ ನೀಡಲು ಅನುವಾಗುವಂತೆ ನಿರಾಕ್ಷೇಪಣಾ ಪತ್ರಕ್ಕಾಗಿ ದೆಹಲಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಇದಕ್ಕೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ “ಸಾಮಾನ್ಯ ಪಾಸ್‌ಪೋರ್ಟ್” ನೀಡುವುದಕ್ಕಾಗಿ ದೆಹಲಿ ನ್ಯಾಯಾಲಯವು ಶುಕ್ರವಾರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ರೂಸ್ ಅವೆನ್ಯೂ ನ್ಯಾಯಾಲಯವು ಗಾಂಧಿಗೆ ಮೂರು ವರ್ಷಗಳ ಕಾಲಾವಧಿಗೆ ಎನ್.ಒ.ಸಿ ನೀಡಿತು. “ನಾನು ನಿಮ್ಮ ಅರ್ಜಿಯನ್ನು ಭಾಗಶಃ ಅನುಮತಿಸುತ್ತಿದ್ದೇನೆ. ಆದರೆ 10 ವರ್ಷಗಳಲ್ಲ, ಮೂರು ವರ್ಷಗಳು ಮಾತ್ರ ”ಎಂದು ನ್ಯಾಯಾಧೀಶರು ಗಾಂಧಿ ಪರ ವಕೀಲರಿಗೆ ಹೇಳಿದರು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಮಂಗಳವಾರದಂದು ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಗೆ ಶುಕ್ರವಾರದೊಳಗೆ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಸ್ವಾಮಿಗೆ ಕೇಳಿಕೊಂಡಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ವೈಭವ್ ಮೆಹ್ತಾ ಅವರು ಪ್ರಯಾಣದ ಹಕ್ಕು ಮೂಲಭೂತ ಹಕ್ಕು ಮತ್ತು ಅನುಮತಿ ಪಡೆಯದೆ ಹಲವಾರು ಬಾರಿ ಪ್ರಯಾಣಿಸಿದ ಕಾಂಗ್ರೆಸ್ ನಾಯಕನ ಪ್ರಯಾಣಕ್ಕೆ ನ್ಯಾಯಾಲಯಗಳು ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎಂದು ಗಮನಿಸಿದರು.

ಈ ಕಾರಣದಿಂದಾಗಿ ಮೂರು ವರ್ಷಗಳ ಅವಧಿಗೆ ಎನ್.ಒ.ಸಿ ಅನ್ನು ನ್ಯಾಯಾಲಯವು ನೀಡಿದೆ.