ವಾಶ್ ರೂಂ ನಲ್ಲಿ ವೀಡಿಯೋ ರೆಕಾರ್ಡಿಂಗ್ ತನಿಖೆಗೆ ಹಿಂದೇಟು ಖಂಡನೀಯ: ಪ್ರಮೋದ್ ಮಧ್ವರಾಜ್

ಉಡುಪಿ: ಇಲ್ಲಿನ ಖಾಸಗಿ ಕಾಲೇಜಿನ ವಾಶ್ ರೂಂ ನಲ್ಲಿ ಯುವತಿಯ ವೀಡಿಯೋ ರೆಕಾರ್ಡ್ ಮಾಡಿರುವುದು ಸಮಸ್ತ ಮಾನವ ಕುಲ ತಲೆ ತಗ್ಗಿಸುವಂತಹ ಕೃತ್ಯ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ತಿಳಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಘಟನೆಯನ್ನು ಸಣ್ಣ ವಿಚಾರ ಎಂದು ಸರಕಾರ ಹಾಗೂ ಪೊಲೀಸ್ ಇಲಾಖೆ ತಿರಸ್ಕರಿಸಿರುವುದು ಖಂಡನೀಯ. ಪೊಲೀಸ್ ಇಲಾಖೆ ಬಗ್ಗೆ ಸಂಶಯವಿದೆ. ಘಟನೆಯಿಂದಾಗಿ ಹೆಣ್ಣು ಮಕ್ಕಳ ಮರ್ಯಾದೆಗೆ ಧಕ್ಕೆಯಾಗಿದೆ ಎಂದರು.

ಇಂತಹ ಗಂಭೀರ ವಿಚಾರವನ್ನು ಗೃಹಮಂತ್ರಿಗಳು ಕ್ಷುಲ್ಲಕವಾಗಿ ಪರಿಗಣಿಸಿದ್ದಾರೆ. ಇದಕ್ಕೆ ಹಲವು ಆಯಾಮಗಳಿದ್ದು ಇದರ ಹಿಂದೆ ಯಾರಿದ್ದಾರೆ ಮತ್ತು ಎಷ್ಟು ಕಾಲದಿಂದ ಇದು ನಡೆಯುತ್ತಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಪ್ರಾರಂಭದಲ್ಲಿ ತನಿಖೆಯನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂದರು.

ಇದರಿಂದಾಗಿ ಕಾಲೇಜಿನಲ್ಲಿ ಯುವತಿಯರು ಶೌಚಾಲಯ ಉಪಯೋಗಿಸಲು ಹೆದರುವಂತಾಗಿದೆ. ಸಮಾಜದಲ್ಲಿ ಭಯ ಹುಟ್ಟಿಸುವ ಕಾರ್ಯ ನಡೆದಿದೆ. ಪ್ರಕರಣದ ಕುರಿತು ಇದುವರೆಗೆ ವಿಚಾರಣೆ ನಡೆಯದಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತಿದೆ ಎಂದು ಅವರು ಹೇಳಿದರು.