ಬಿಜೆಪಿ ಪರ ದೀಪಿಕಾ-ರಣ್‍ವೀರ್ ಪ್ರಚಾರ: ಫೋಟೊ ವೈರಲ್ 

ಮುಂಬೈ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಮುಖಂಡರು ಅಬ್ಬರದ ಪ್ರಚಾರ ನಡೆಯುತ್ತಿದ್ದು, ಸಿನಿಮಾ ಕಲಾವಿದರು ಇದಕ್ಕೆ ಸಾಥ್ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಬಾಲಿವುಡ್ ಕ್ಯೂಟ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಶಾಲು ಹಾಕಿಕೊಂಡಿರುವ ಫೋಟೋ ವೈರಲ್ ಆಗಿದೆ.
ಏಕ್ ಬಿಹಾರಿ ಸೌ ಪೆ ಬಿಹಾರಿ ಎಂಬ ಫೇಸ್‍ಬುಕ್ ಖಾತೆಯಲ್ಲಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಶಾಲು ಹಾಕಿಕೊಂಡಿರುವ ಫೋಟೋ ಅಪ್ಲೋಡ್ ಮಾಡಲಾಗಿದೆ. ಶಾಲ್ ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂದು ಬರೆಯಲಾಗಿದೆ. ಫೋಟೋ ಕೆಳಗಡೆ ‘ಕಮಲದ ಬಟನ್ ಒತ್ತಿ, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ’ ಎಂದು ಬರೆಯಲಾಗಿದೆ.
ಫೋಟೋ ಅಪ್ಲೋಡ್ ಆದ ಬಳಿಕ, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ದೀಪ್‍ವೀರ್ ಮದುವೆ ಬಳಿಕ ಅಂದರೆ ನವೆಂಬರ್ 2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂಬ ಸಾಲು ಬರೆದು ಕೊಂಚ ಎಡಿಟ್ ಮಾಡಿ ಹರಿಬಿಡಲಾಗಿದೆ‌ ಎನ್ನಲಾಗುತ್ತಿದೆ.