ಮಂಗಳೂರು: ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಜನವರಿ 25-2024 ರ ಅಧಿಸೂಚನೆ ಸಂಖ್ಯೆ 9-27/2017-0,3 (1) ಪ್ರಕಾರ ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜನ್ನು ಪರಿಗಣಿತ ವಿಶ್ವವಿದ್ಯಾನಿಲಯವೆಂದು ಘೋಷಿಸಲಾಗಿದೆ ಎಂದು ಕಾಲೇಜಿನ ಪ್ರಾಶುಂಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ತಿಳಿಸಿದ್ದಾರೆ.
ಮಂಗಳೂರಿನ ಪ್ರಸಿದ್ದ ಸ೦ತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ವಿಶ್ವವಿದ್ಯಾನಿಲಯದ ಸ್ಥಾನಮಾನದ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದಿಸಿದೆ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಿದೆ. ಈ ಸ್ಥಾನಮಾನದೊಂದಿಗೆ ಸಂಸ್ಥೆಯು ಇನ್ನು ಮುಂದೆ ಸ೦ತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಎಂದು ಕರೆಯಲ್ಪಡುತ್ತದೆ. ಗುಣ ಮಟ್ಟದ ಉನ್ನತ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಸೇವೆ ಸಲ್ಲಿಸಬೇಕೆಂದು ಬಹುದಿನಗಳಿ೦ದ ಅವಕಾಶದ ನಿರೀಕ್ಷೆಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿಗೆ ಈ ಸ್ಥಾನಮಾನವು ವಿಶೇಷ ಸಂತಸವನ್ನು ತಂದಿದೆ.
ಯುಜಿಸಿ ಮತ್ತು ಶಿಕ್ಷಣ ಸಚಿವಾಲಯವು, ಕಾಲೇಜಿನ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ, ಪಠ್ಯಕ್ರಮ ವಿನ್ಯಾಸ, ಸ೦ಶೋಧನೆ ಮತ್ತು ಆವಿಷ್ಕಾರ, ಪದವಿ ಫಲಿತಾ೦ಶಗಳು, ವಿದ್ಯಾರ್ಥಿಗಳ ಸಾಧನೆಯ ಮಟ್ಟಗಳು, ನೇಮಕಾತಿ, ಸಂಸ್ಥೆಯ ಕನಸು – ಧ್ಯೇಯ ಮತ್ತು ಸಮಾಜದ ಮೇಲೆ ಇವುಗಳು ಬೀರಿದ ಪರಿಣಾಮವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಈ ಸ್ಥಾನಮಾನವನ್ನು ನೀಡಿದೆ. ಈ ಎಲ್ಲ ಮಾನದ೦ಡಗಳ ಜೊತೆಗೆ ನ್ಯಾಕ್ ಮತ್ತು ನಿರ್ಫ್ ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನೀಡಿರುವ ಶ್ರೇಯಾ೦ಕಗಳನ್ನು ಪರಿಗಣಿಸಿ ಸ೦ತ ಅಲೋಶಿಯಸ್ ಕಾಲೇಜಿಗೆ ಈ ಮಾನ್ಯತೆಯನ್ನು ನೀಡಿದೆ. ಕಾಲೇಜಿಗೆ ದೊರೆತ ಈ ಮಾನ್ಯತೆಯಿಂದಾಗಿ ಸಂಸ್ಥೆಯು ಜಾಗತಿಕವಾಗಿ ಸ್ಪರ್ಧಾತ್ಮಕ ಪಠ್ಯಕ್ರಮ, ಉನ್ನತ-ಮಟ್ಟದ ಸ೦ಶೋಧನೆ, ಆವಿಷ್ಕಾರಗಳು ಮತ್ತು ಉದ್ಯಮಶೀಲತಾ ಪ್ರತಿನಿಧೀಕರಣ ಮೊದಲಾದುವುಗಳನ್ನು ದಕ್ಷವಾಗಿ ನಡೆಸುವುದಕ್ಕೆ ಮತ್ತು ರಚನಾತ್ಮಕ ವಾತಾವರಣವನ್ನು ನಿರ್ಮಿಸುವುದಕ್ಕೆ ಶಕ್ತವಾಗುವುದು.
ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಪಾಲುದಾರರೊಂದಿಗೆ ಗಟ್ಟಿಯಾದ ಸಹಯೋಗದ ಸಾಧ್ಯತೆಗಳನ್ನು ಹುಡುಕಲು ಇದು ದೊಡ್ಡ ಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತದೆ.
1880 ರಲ್ಲಿ ಜೆಸ್ಯೂಟ್ ಪಿತಾಮಹರಿ೦ದ ಸ್ಥಾಪಿತವಾದ ಸ೦ತ ಅಲೋಶಿಯಸ್ ಕಾಲೇಜು ಈ ಪ್ರದೇಶದ ಯುವಕರಲ್ಲಿ ಬದ್ಧತೆ, ಸಾಮರ್ಥ್ಯ, ಸಹಾನುಭೂತಿ ಮತ್ತು ಆತ್ಮಸಾಕ್ಷಿಯುಳ್ಳ ವ್ಯಕ್ತಿಗಳನ್ನಾಗಿ ರೂಪಿಸಿದೆ. ಜೊತೆಗೆ ಈ ಸ೦ಸ್ಥೆ ಹಲವಾರು ವಿಶಿಷ್ಟ ಸಾಧನೆಗಳನ್ನು ಹೊ೦ದಿರುವ ಈ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒ೦ದಾಗಿದೆ. ಸ೦ಸ್ಥೆಯ ರಾಷ್ಟ್ರೀಯ ಮತ್ತು ಜಾಗತಿಕ ಸ್ಥಾನಮಾನವನ್ನು ಪರಿಗಣಿಸಿ 2007 ರಲ್ಲಿ ಅದಕ್ಕೆ ಸ್ವಾಯತ್ತತೆಯ ಸ್ಥಾನಮಾನ ನೀಡಲಾಯಿತು. ಇದಲ್ಲದೆ, ಸ೦ಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ನ್ಯಾಕ್ ಮಾನ್ಯತೆಗಳ ಎಲ್ಲಾ ನಾಲ್ಕು ಹ೦ತಗಳ ಮೌಲ್ಯಮಾಪನ ಕ್ರಮದಲ್ಲಿ ಉನ್ನತ ದರ್ಜೆಯ ಶ್ರೇಯಾ೦ಕವನ್ನು ನಿರ೦ತರವಾಗಿ ಪಡೆದುಕೊ೦ಡಿದೆ. ನಾಲ್ಕನೇ ಹ೦ತದ ಮೌಲ್ಯಮಾಪನದಲ್ಲಿ ಒಟ್ಟು 4ರಲ್ಲಿ 3.67 ಅಂಕ ಸಿಜಿಪಿಎ ಯೊಂದಿಗೆ A++ ದರ್ಜೆಯನ್ನು ಪಡೆದಿದೆ. ವಿರ್ಭ್ ಶ್ರೇಯಾಂಕದಲ್ಲಿ ಸತತ 3 ಅವಧಿಗೆ ಉನ್ನತ 100 ಕಾಲೇಜುಗಳಲ್ಲಿ ಒಂದಾಗಿದೆ.
ಕಾಲೇಜಿಗೆ ದೊರೆತ ಈ ವಿಶ್ವವಿದ್ಯಾನಿಲಯ ಸ್ಥಾನಮಾನವು ಕಾಲೇಜಿನ ಪ್ರಾಧ್ಯಾಪಕರ ವೃಂದದವರ, ಬೋಧಕೇತರ ಸಿಬ್ಬಂದಿಗಳ, ವಿದ್ಯಾರ್ಥಿಗಳ, ಪೋಷಕರ ಮತ್ತು ಸಂಬಂಧಪಟ್ಟ ಎಲ್ಲರ ಸಮರ್ಪಣಾ ಮನೋಭಾವ ಮತ್ತು ದಣಿವರಿಯದ ಶ್ರಮದ ಫಲವಾಗಿದೆ. ಪರಿಗಣಿತ ವಿಶ್ವವಿದ್ಯಾನಿಲಯವಾಗಿ ಸ೦ತ ಆಲೋಶಿಯಸ್ ಶಿಕ್ಷಣ ಸ೦ಸ್ಥೆ ಹೊಸ ಕನಸುಗಳೊಂದಿಗೆ ತನ್ನ ಪಯಣವನ್ನು ಆರ೦ಭಿಸಲಿದೆ. ಕಾಲೇಜಿನ ಕನಸು ಕಾಣ್ಕೆಯಂತೆ ಯುವ ಜನತೆಯನ್ನು ಪರರಿಗಾಗಿ ರೂಪಿಸುವ ತನ್ನ ಪ್ರಯತ್ನವನ್ನು ವಿನೂತನ ಬಗೆಯಲ್ಲಿ ಮುಂದುವರಿಸಲಿದೆ.
ಸ೦ಸ್ಕೆಯ ಈ ಹೊಸ ಸಾಧನೆಗೆ ಕಾರಣೀಕರ್ತರಾದ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಹಾಯ ಸಹಕಾರವನ್ನು ಸಂಸ್ಥೆ ವಿಶೇಷವಾಗಿ ನೆನಪಿಸಿಕೊಳ್ಳುತ್ತದೆ. ಪರಿಗಣಿತ ವಿಶ್ವವಿದ್ಯಾನಿಲಯದ ಸ್ವರೂಪಕ್ಕೆ ಹೊ೦ದಿಕೊಳ್ಳುತ್ತಾ ಶೈಕ್ಷಣಿಕ ಸ೦ಸ್ಥೆಯ ಸಾಮಾಜಿಕ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜ ಕಟ್ಟುವ ಸದುದ್ದೇಶದ ಕಾರ್ಯಗಳು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಬೇಕೆಂದು ಸಂಸ್ಥೆ ಭಾವಿಸುತ್ತದೆ ಎಂದು ರೆಕ್ಟರ್.ಫಾ. ಮೆಲ್ವಿನ್ ಜೆ. ಪಿಂಟೊ, ಎಸ್.ಜೆ. ಹೇಳಿದ್ದಾರೆ.