ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕಾರ್ಯ ಜನರ ಮನಸ್ಸಿನಲ್ಲಿ ಉಳಿಯುತ್ತದೆ: ಎಂ.ಎನ್. ನಟರಾಜ್

ಉಡುಪಿ: ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುವವರಿಗೆ ಜನರ ಮನಸ್ಸಿನಲ್ಲಿಯೂ ದೊಡ್ಡ ಸ್ಥಾನ ದೊರೆಯುತ್ತದಲ್ಲದೆ, ಗೌರವ ಸನ್ಮಾನಗಳು ಅರಸಿ ಬರುತ್ತವೆ ಎಂದು ನೆಹರು ಯುವ ಕೇಂದ್ರದ ಪ್ರಾಂತೀಯ ಹಾಗೂ ರಾಜ್ಯ ನಿರ್ದೇಶಕ ಎಂ.ಎನ್. ನಟರಾಜ್ ಹೇಳಿದರು.

ಅವರು ಉಡುಪಿ ಜಿಲ್ಲೆಯ ವಿವಿಧ ಯುವಕ ಹಾಗೂ ಯುವತಿ ಮಂಡಲಗಳ ನೇತೃತ್ವದಲ್ಲಿ ಇಲ್ಲಿನ ಕ್ರಿಸ್ಟ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿಲ್‌ಫ್ರೆಡ್ ಡಿಸೋಜಾ ಅವರನ್ನು ಸನ್ಮಾನಿಸಿ ಮಾತನಾಡಿ ನೆಹರು ಯುವ ಕೇಂದ್ರದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳ ಪೈಕಿ ವಿಲ್‌ಫ್ರೆಡ್ ಅವರೂ ಓರ್ವರಾಗಿದ್ದು, ಅವರ ಕಾರ್ಯಕ್ಷಮತೆಗೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.

ಯುವ ಕೇಂದ್ರದ ಮೂಲಕ ಯುವಕರನ್ನು ಸಂಘಟನಾತ್ಮವಾಗಿ ತೊಡಗಿಕೊಳ್ಳುವಂತೆ ಮಾಡಲು ಹತ್ತಾರು
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಯುವ ಸಬಲೀಕರಣ ಇಲಾಖೆಯ ಜೊತೆಗೂಡಿ ಸ್ವಸಹಾಯ ಗುಂಪುಗಳನ್ನು ರಚಿಸಲು ಯೋಜಿಸಲಾಗಿದೆ ಎಂದರು. ಉಡುಪಿ ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ರಾಜ್ಯ ಮಟ್ಟದ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ನಿರ್ಗಮಿತ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಮಾತನಾಡಿ, ಸರಕಾರಿ ಸೇವೆಯನ್ನು ನಿಷ್ಠೆಯಿಂದ
ಮಾಡಿರುವುದರ ಬಗ್ಗೆ ಸಂತೃಪ್ತಿ ಇದೆ. ಇಂದಿನ ಸನ್ಮಾನದ ಮೂಲಕ ತೋರಿರುವ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಯುವಜನಾಂಗದ ಮೂಲಕ ಅತ್ಯುತ್ತಮ ಕಾರ್ಯ ಸಾಧನೆ ಸಾಧ್ಯವಿದೆ ಎಂಬುದನ್ನು ಅರಿತ ಕೇಂದ್ರ ಸರಕಾರದ ಸಾಕಷ್ಟು ಕಾರ್ಯಕ್ರಮಗಳನ್ನು ಯುವ ಮಂಡಲಗಳ ಮೂಲಕ ಜಾರಿಗೊಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಬಗ್ಗೆ ಖುಷಿಯಿದೆ ಎಂದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಜಲತಜ್ಞ ಜೋಸೆಫ್ ರೆಬೆಲ್ಲೋ, ನೆಹರು ಯುವ ಕೇಂದ್ರದ ನೂತನ ಯುವ ಸಮನ್ವಯಾಧಿಕಾರಿ ಯಶವಂತ್ ಯಾಧವ್, ಲೆಕ್ಕಾಧಿಕಾರಿ ವಿಷ್ಣುಮೂರ್ತಿ, ಜಗದೀಶ್‍, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಶಾಂತ್ ಪೂಜಾರಿ, ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವವೃಂದದ ಅಧ್ಯಕ್ಷ ದೀಕ್ಷಿತ್ ನಾಯಕ್, ಶಿರ್ವ ಮಹಿಳಾ ಮಂಡಳಿ ಅಧ್ಯಕ್ಷ ಗೀತಾ ವಾಗ್ಲೆ, ಉಡುಪಿ ಸ್ವಚ್ಛ ಭಾರತ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯಕ್, ಹೆಜಮಾಡಿ ಕರಾವಳಿ ಯುವ ವೃಂದದ ಅಧ್ಯಕ್ಷ ಶರಣ್ ಮಟ್ಟು ಉಪಸ್ಥಿತರಿದ್ದರು.

ಯುವ ಸಮನ್ವಯಾಧಿಖಾರಿ ವಿಲ್‌ಫ್ರೆಡ್ ಡಿಸೋಜಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ನೆಹರೂ ಯುವ ಕೇಂದ್ರದ ಪ್ರಾಂತೀಯ ಹಾಗೂ ರಾಜ್ಯ ನಿರ್ದೇಶಕ ನಟರಾಜ್ ಹಾಗೂ ಡಿವೈಸಿ ಯಶವಂತ್ ಯಾದವ್ ಅವರನ್ನು ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪಡೆದ ಅಬ್ಬನಡ್ಕ್ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸದಸ್ಯರನ್ನು ಗೌರವಿಸಲಾಯಿತು.

ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಸನ್ನಾ ಭಟ್ ಪ್ರಾಸ್ತಾವಿಸಿದರು. ಅಬ್ಬನಡ್ಕ ಶ್ರೀ
ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ಸಂದೀಪ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಸ್ವಾಗತಿಸಿ, ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವವೃಂದದ ಕಾರ್ಯದರ್ಶಿ ನರೇಂದ್ರ ವಂದಿಸಿದರು. ಸಾಣೂರು ಯುವಕ ಮಂಡಲದ ಉಪಾಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.