ಸಹಕಾರಿ ಸಂಸ್ಥೆಯ ನೌಕರರನ್ನು ಫ್ರಂಟ್ ‌ಲೈನ್ ವಾರಿಯರ್ಸ್ ಎಂದು‌ ಘೋಷಿಸಿ; ಕೋವಿಡ್ ಲಸಿಕೆ, ವಿಮಾ ಭದ್ರತೆ ಒದಗಿಸಿ: ಬೋಳ ಸದಾಶಿವ ಶೆಟ್ಟಿ ಆಗ್ರಹ

ಉಡುಪಿ: ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರ, ಕ್ರೆಡಿಟ್, ಸೌಹಾರ್ದ ಹಾಗೂ ಎಲ್ಲಾ ಸಹಕಾರಿ ಸಂಘಗಳ ಸಿಬ್ಬಂದಿ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಹೀಗಾಗಿ ಎಲ್ಲ ಸಹಕಾರಿ ಸಿಬ್ಬಂದಿಗಳಿಗೆ ಆದ್ಯತೆಯಲ್ಲಿ‌ ಕೋವಿಡ್ ಲಸಿಕೆ ನೀಡುವುದರ ಜತೆಗೆ ವಿಮಾ ಭದ್ರತೆ ಒದಗಿಸಬೇಕು. ಎಲ್ಲಾ ಸಹಕಾರಿ ಸಿಬ್ಬಂದಿಗಳನ್ನು ಕೋವಿಡ್ -19 ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ಉಡುಪಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹಾಗೂ ಸಹಕಾರ ಭಾರತೀಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಎಸ್ ಕೆ. ಆಗ್ರಹಪಡಿಸಿದ್ದಾರೆ.

ಸಹಕಾರಿ ಸಂಸ್ಥೆಯ ನೌಕರರು ಬ್ಯಾಂಕಿಂಗ್ ವ್ಯವಹಾರ, ಪಡಿತರ ಸಾಮಗ್ರಿ ವಿತರಣೆ ಹಾಗೂ ಹೈನುಗಾರಿಕೆ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲೂ ತಮ್ಮ ಪ್ರಾಣದ ಹಂಗನ್ನು ಲೆಕ್ಕಿಸದೆ ಜನರ ಸೇವೆಯಲ್ಲಿ‌ ಸದಾ ತೊಡಗಿಕೊಂಡಿದ್ದಾರೆ.

ಆದ್ದರಿಂದ ಸರ್ಕಾರ ಸಹಕಾರಿ‌ ಸಂಸ್ಥೆಯ ಸಿಬ್ಬಂದಿಯ ಸೇವೆಯನ್ನು ಪರಿಗಣಿಸಿ, ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ನೀಡಬೇಕು. ಸಹಕಾರಿ ಸಿಬ್ಬಂದಿ ಕೋವಿಡ್ 19 ನಿಂದ ಮೃತಪಟ್ಟರೆ, ಆತನ ಮನೆಯವರ ಜೀವನ ಭದ್ರತೆಗಾಗಿ ವಿಮಾ ಭದ್ರತೆ ಒದಗಿಸಬೇಕು. ಅದೇ ರೀತಿ ಎಲ್ಲಾ ಸಹಕಾರಿ ಸಿಬ್ಬಂದಿಗಳನ್ನು ಕೋವಿಡ್ -19 ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಬೇಕು ಎಂದು ಅವರು ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.