ಉಡುಪಿ: ಸುರತ್ಕಲ್ ಎನ್.ಐ.ಟಿ.ಕೆ ಬಳಿ ಇದ್ದ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ಜಾರಿಗೊಳ್ಳುವ ಹಿನ್ನೆಲೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಅಜ್ಜರಕಾಡಿನ ವಿಮಾ ನೌಕರರ ಸಂಘದ ಕಚೇರಿಯಲ್ಲಿ ಸಭೆ ನಡೆಸಿದರು.
ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಪ್ರಕಟಗೊಂಡಿದ್ದು, ಟೋಲ್ ಪ್ಲಾಜಾದ ಮಾಲಕತ್ವ ಹೊಂದಿರುವ ನವಯುಗ ಸಂಸ್ಥೆಯು ಟೋಲ್ ಸಂಗ್ರಹಕ್ಕೆ ಹಿಂದೇಟು ಹಾಕಿರುವುದರಿಂದ ತಾತ್ಕಾಲಿಕವಾಗಿ ಪರಿಷ್ಕೃತ ಸುಂಕ ಸಂಗ್ರಹ ಮಾಡಲಾಗಿಲ್ಲ. ಉಡುಪಿ ಜಿಲ್ಲಾಡಳಿತ ಸಮಾಯಾವಕಾಶ ಕೇಳಿದ್ದರೂ ರಾಜ್ಯ ಸರಕಾರದ ಒಪ್ಪಿಗೆ ದೊರೆತಿರುವುದರಿಂದ ಯಾವುದೇ ಕ್ಷಣದಲ್ಲಿ ದುಬಾರಿ ಸಂಗ್ರಹ ಆರಂಭಗೊಳ್ಳಬಹುದು. ವಿಧಾನ ಸಭೆ ಚುನಾವಣೆಯವರೆಗೆ ಜಿಲ್ಲೆಯ ಸಂಸದ, ಶಾಸಕರು ದುಪ್ಪಟ್ಟು ಸಂಗ್ರಹ ಮುಂದೂಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ನಡೆಸಿದ್ದಾರೆ. ಸದ್ಯದಲ್ಲೇ ಹೆಜಮಾಡಿಯಲ್ಲಿ ದುಬಾರಿ ಟೋಲ್ ಸಂಗ್ರಹ ಆರಂಭಗೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.
ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆಧ್ಯಾದೇಶ ಹೆದ್ದಾರಿ ಪ್ರಾಧಿಕಾರ ವಾಪಾಸು ಪಡೆಯುವುದು ಮಾತ್ರ ಶಾಶ್ವತ ಪರಿಹಾರವಾಗಿದ್ದು ಆ ನಿಟ್ಟಿನಲ್ಲಿ ಎರಡೂ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರಾಂದೋಲನದ ನಿಟ್ಟಿನಲ್ಲಿ ಡಿ.29 ರಂದು ಉಡುಪಿ ತಾಲೂಕು ಕಚೇರಿ ಮುಂಭಾಗ ಬೃಹತ್ ಸಾಮೂಹಿಕ ಧರಣಿ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಹಿಸಿದ್ದರು. ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯ ಚಂದ್ರ ಜೈನ್, ಬಸ್ ಮಾಲಕರ ಸಂಘದ ಮುಂದಾಳು ಕಿಶನ್ ಹೆಗ್ಡೆ ಕೊಳ್ಕೆಬೈಲ್, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಎಂ.ಜಿ.ಹೆಗ್ಡೆ, ಸುಂದರ ಮಾಸ್ತರ್, ಸುರೇಶ್ ಕಲ್ಲಾಗರ, ಶೇಖರ ಹೆಜಮಾಡಿ, ರಾಲ್ಪಿ ಡಿಕೋಸ್ತ ಹೆಜಮಾಡಿ, ಶಶಿಧರ ಗೊಲ್ಲ, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು. ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು.