ಕಾರ್ಕಳ: ಮನೆಗೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ಇಂದು ಸಂಜೆ 4 ಗಂಟೆಗೆ ನಡೆದಿದೆ.
ಮೃತರನ್ನು ನೀರೆ ರಾಜೀವನಗರದ ನಿವಾಸಿ ವಾದಿರಾಜ ಆಚಾರ್ಯ(60) ಎಂದು ಗುರುತಿಸಲಾಗಿದೆ. ಇಂದು ಸಂಜೆ ವಾದಿರಾಜ ಅವರ ಮನೆಗೆ ಸಿಡಿಲು ಬಡಿದಿದ್ದು, ಮನೆಯೊಳಗಿದ್ದ ವಾದಿರಾಜ ಆಚಾರ್ಯ ಅವರು ಸಿಡಿಲಿನ ಹೊಡೆತಕ್ಕೆ ನೆಲದಲ್ಲಿ ಕುಸಿದು ಬಿದ್ದಿದ್ದರು.
ಕೂಡಲೇ ಅವರನ್ನು ಚಿಕಿತ್ಸೆಗಾಗಿ ಬೈಲೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಸಿಡಿಲಾಘಾತಕ್ಕೆ ಮನೆಯ ವಿದ್ಯುತ್ ಪರಿಕರಗಳು ಸುಟ್ಟು ಹೋಗಿದ್ದು, ಮನೆಗೂ ಹಾನಿ ಉಂಟಾಗಿದೆ. ಸುತ್ತಮುತ್ತಲಿನ ಹಲವು ಮನೆಗಳಿಗೂ ಹಾನಿ ಸಂಭವಿಸಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.