ಹೆಬ್ರಿ: ಮಂಗಗಳನ್ನು ಕೊಂದು ರಸ್ತೆಬದಿ ಎಸೆದಿರುವ ಅಮಾನವೀಯ ಘಟನೆ ಸೋಮೇಶ್ವರ- ಮಡಾಮಕ್ಕಿ ರಸ್ತೆಯ ನಾಡ್ಪಾಲು ಎಂಬಲ್ಲಿ ನಡೆದಿದೆ.
ಕಿಡಿಗೇಡಿಗಳು ಬೇರೆ ಪ್ರದೇಶಗಳಲ್ಲಿ ಮಂಗಗಳನ್ನು ಹತ್ಯೆಗೈದು ಗೋಣಿಚೀಲದಲ್ಲಿ ತುಂಬಿಸಿ ನಾಡ್ಪಾಲು ರಸ್ತೆ ಬದಿಯಲ್ಲಿ ತಂದು ಹಾಕಿದ್ದಾರೆ. ಈ ಹೀನಾಕೃತ್ಯ ಎರಡು ದಿನಗಳ ಹಿಂದೆ ನಡೆದಿರಬಹುದೆಂದು ಶಂಕಿಸಲಾಗಿದೆ. ಮಂಗಗಳ ಮೃತದೇಹಗಳು ಕೊಳೆತು ಹೋಗಿವೆ.
ವಿಷಯ ತಿಳಿಯುತ್ತಿದ್ದಂತೆ ಇಂದು ಬೆಳಗ್ಗೆ ಸ್ಥಳಕ್ಕೆ ವನ್ಯಜೀವಿ ವಿಭಾಗದ ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ವನ್ಯಜೀವಿ ವಿಭಾಗದ ಉಪವಲಯ ಅರಣ್ಯಾಧಿಕಾರಿ ರುದ್ರನ್ ಕೂಡ ಆಗಮಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.