ಉಡುಪಿ: ನೋ ಪಾರ್ಕಿಂಗ್ ವ್ಯವಸ್ಥೆ ಕ್ರಮಬದ್ಧಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಉಡುಪಿ-ಮಣಿಪಾಲದಲ್ಲಿ ಪಾರ್ಕಿಂಗ್  ಮತ್ತು ಸಂಚಾರ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್  ವ್ಯವಸ್ಥೆಯನ್ನು ಕ್ರಮಬದ್ದಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಹಲವೆಡೆ ರಸ್ತೆ ಬದಿಯಲ್ಲಿಯೇ ವಾಹನಗಳ ಪಾರ್ಕಿಂಗ್ನಿಂದಾಗಿ ಪಾದಾಚಾರಿಗಳಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ವಾಹನಗಳ ಪಾರ್ಕಿಂಗ್ ಸೂಕ್ತ ಸ್ಥಳಾವಕಾಶ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.

ಈ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ನಿಷೇಧಿಸಲು ಅಧಿಸೂಚನೆ ಹೊರಡಿಸಬೇಕಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳನ್ನು ಪಾರ್ಕ್ ಮಾಡಲು ಸ್ಥಳವನ್ನು ಗುರುತಿಸಬೇಕು ಹಾಗೂ ಸಾಧ್ಯವಾದಲ್ಲಿ ಬಹು ಹಂತದ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಬೇಕು ಎಂದ ಜಿಲ್ಲಾಧಿಕಾರಿ, ಈ ನಿಟ್ಟಿನಲ್ಲಿ ನಗರಸಭೆ, ಆರ್.ಟಿ.ಒ ಹಾಗೂ ಪೋಲೀಸ್ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಫಘಾತಗಳುಂಟಾಗುತ್ತಿರುವ ಕಪ್ಪು ಚುಕ್ಕೆ ಸ್ಥಳಗಳನ್ನು ಗುರುತಿಸಿ ಅಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅಫಘಾತ ಪ್ರಮಾಣ ಕಡಿಮೆ ಆಗುವಂತೆ ಕ್ರಮ ಕೈಗೊಳ್ಳಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತವಾಗಿ ರಸ್ತೆ ವಿಭಾಜಕವನ್ನು ತುಂಡರಿಸಿ ವಾಹನ ತಿರುಗುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳು ರಸ್ತೆ ಸುರಕ್ಷತೆ ಕಾನೂನುಗಳನ್ನು ಮೀರಿ ಶಾಲೆಗಳಿಗೆ  ವಾಹನಗಳನ್ನು ತಾವೇ ಚಲಾಯಿಸುವಂತಹ ಘಟನೆಗಳು ಕಂಡುಬರುತ್ತಿದ್ದು, ಇಂತಹ ಪ್ರಕರಣಗಳು ಪತ್ತೆಯಾದಲ್ಲಿ ವಿದ್ಯಾರ್ಥಿಯು ಕಲಿಯುತ್ತಿರುವಂತಹ ವಿದ್ಯಾಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸಿಗ್ನಲ್ ಲೈಟ್‍ಗಳನ್ನು ಅಳವಡಿಸಲು ಜಂಕ್ಷನ್‍ಗಳನ್ನು ಗುರುತಿಸಲಾಗಿದೆ ಮತ್ತು ಪಾಕಿರ್ಂಗ್ ವ್ಯವಸ್ಥೆಗಾಗಿ ಸ್ಥಳ ಗುರುತಿಸುವ ಕೆಲಸವನ್ನು ಸರ್ವೆ ಮೂಲಕ ನಡೆಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸಭೆಯಲ್ಲಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಡಾ.ಆನಂದ್ ಕಲ್ಲೋಳಿಕರ್, ಆರ್.ಟಿ.ಒ ಅಧಿಕಾರಿಗಳು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು