ವಾರದೊಳಗೆ ಅಪಘಾತ ಪ್ರಕರಣಗಳ ಶಾಶ್ವತ ಪರಿಹಾರ ಕಾರ್ಯಗಳ ವರದಿ ಒಪ್ಪಿಸಿ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ರಾಷ್ಟೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ತಾತ್ಕಾಲಿಕ ಸುರಕ್ಷತಾ ಸೌಕರ್ಯಗಳ ಕಾರ್ಯಗಳನ್ನು ಕೈಗೊಳ್ಳುವುದರಿಂದ ಮರಣ ಹೊಂದುವಂತಹ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಇದಕ್ಕೆ ಹೆಚ್ಚಿನ ಒತ್ತು ನೀಡಿ ಮುಂದಿನ ದಿನಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ತೆಗೆದುಕೊಂಡ ಕಾರ್ಯಗಳ ಬಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಅನುಸರಣಾ ವರದಿಯನ್ನು ಒಂದು ವಾರದೊಳಗೆ ನೀಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಬುಧವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟೀಯ ಹೆದ್ದಾರಿ ಅಧಿಕಾರಿಗಳು ಇಂದ್ರಾಳಿ ರೈಲ್ವೆ ಮೇಲು ಸೇತುವೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಅಕ್ಟೋಬರ್ 1 ರಿಂದ ಪ್ರಾರಂಭಿಸಿ 1 ತಿಂಗಳ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಒಂದು ಬದಿಯ ರಸ್ತೆಯನ್ನು ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯವನ್ನು ಕೈಗೊಳ್ಳಬೇಕು. ಪೊಲೀಸ್ ಇಲಾಖೆ, ನಗರಸಭೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಈ ಕಾಮಗಾರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸುಧಾ ರಣಾ ಮೂಲಭೂತ ಕಾಮಗಾರಿಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತ ಪ್ರಮಾಣವನ್ನು ಅತ್ಯಂತ ಕಡಿಮೆಗೊಳಿಸಬೇಕು ಎಂದರು.

ಜನಸಾಮಾನ್ಯರು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದಾಗ ಅಪಘಾತಗಳನ್ನು ತಪ್ಪಿಸಲು ಸಾಧ್ಯ., ನಿಯಮಗಳನ್ನು ಪಾಲಿಸಿದದ್ದಲ್ಲಿ ಸುರಕ್ಷಿತವಾಗಿ ಸಂಚರಿಸಲು ಅಸಾಧ್ಯವಾಗುತ್ತದೆ ಇದು ಪ್ರತಿಯೊಬ್ಬರ ಗಮನದಲ್ಲಿರಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಸೂಚನಾ ಫಲಕಗಳನ್ನು ಹಾಗೂ ಹಂಪ್ಸ್, ಕ್ಯಾಟ್ ಐ , ಪಾದಚಾರಿ ಮಾರ್ಗದ ಲೈನ್ ಗಳು ಸೇರಿದಂತೆ ಮತ್ತಿತರ ಸೂಚನೆಗಳನ್ನು ತಪ್ಪದೇ ಅಳವಡಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ ಮಾತನಾಡಿ, ರಾಷ್ಟೀಯ ಹೆದ್ದಾರಿಯಲ್ಲಿ ಈ ಹಿಂದೆಯೇ ಅಪಘಾತ ವಲಯಗಳನ್ನು ಗುರುತಿಸುವ ಹಾಗೂ ಅಗತ್ಯವಿರುವ ವೈಜ್ಞಾನಿಕ ಕಾರ್ಯಗಳನ್ನು ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನೂ ಕೈಗೊಳ್ಳದಿರುವ ಬಗ್ಗೆ ಸಮಿತಿಯ ಗಮನಕ್ಕೆ ತಂದ ಅವರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಸ್ಥಳದಲ್ಲಿ ಅಪಘಾತ ನಡೆದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಕರಣಗಳಲ್ಲಿ ಸಹ ಅಪರಾಧಿಗಳನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ರಸ್ತೆ ನಿಯಮಗಳ ಉಲ್ಲಂಘನೆಯ 42944 ಪ್ರಕರಣಗಳಲ್ಲಿ 1.96 ಕೋಟಿ ಗೂ ಹೆಚ್ಚೂ ದಂಡವನ್ನು ಸಂಗ್ರಹಸಲಾಗಿದೆ ಎಂದ ಅವರು ವಾಹನ ಸವಾರರು ಸೀಲ್ ಬೆಲ್ಟ್, ಹೆಲ್ಮೆಟ್ ಸೇರಿದಂತೆ ಮತ್ತಿತರ ಸುರಕ್ಷತಾ ಸಾಧನಗಳನ್ನು ತಪ್ಪದೇ ಬಳಕೆ ಮಾಡಿಕೊಳ್ಳಬೇಕು ಇದರಿಂದ ಸುರಕ್ಷಿತವಾಗಿರಲು ಸಾಧ್ಯ ಎಂದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ರಾಷ್ಟೀಯ ಹೆದ್ದಾರಿ
ಅಭಿಯಂತರ ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.