ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣನಹಳ್ಳಿಯಲ್ಲಿ ಯುವಕನೊಬ್ಬ ಸರ್ಕಾರಿ ಕೆಲಸ ಸಿಗದ ಹಿನ್ನೆಲೆ, ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ ಅಂಜಿನಪ್ಪ (26). ಈತ ಪದವಿ ಮುಗಿಸಿದಾಗಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದ. ಅಲ್ಲದೇ ತನ್ನ ರೂಂನಲ್ಲಿ ನಿರಂತರವಾಗಿ ಓದುತ್ತಿದ್ದ. ಆದರೂ ತಾನು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಮನ ನೊಂದಿದ್ದ. ಅಲ್ಲದೇ, ಕೊಠಡಿಯಲ್ಲಿ ಎಲ್ಲಿ ನೋಡಿದರೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೇ ಇದ್ದವು. ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಸಿಗುತ್ತಿಲ್ಲ ಎಂದು ಸ್ನೇಹಿತರ ಬಳಿ ಆಗಾಗ ಬೇಸರ ತೋಡಿಕೊಳ್ಳುತ್ತಿದ್ದನು. ಆ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















