ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಜುಲೈ 24ರಂದು ವಿಶ್ವಾದ್ಯಂತ ಏಕಕಾಲಕ್ಕೆ ಟ್ರೇಲರ್ ಬಿಡುಗಡೆಯಾಗಲಿದ್ದು, ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಟ್ರೇಲರ್ ಬಿಡುಗಡೆಯ ಕುರಿತ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, ಜುಲೈ 24ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಟ್ರೇಲರ್ ಅನಾವರಣಗೊಳ್ಳಲಿದೆ ಎಂದು ತಿಳಿಸಿದೆ.
ಇದಕ್ಕೂ ಮೊದಲು ಏಪ್ರಿಲ್ 2ರಂದು ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಅದರಲ್ಲಿ ಮೊದಲ ಬಾರಿಗೆ ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ಲುಕ್ ಅನಾವರಣಗೊಂಡಿದ್ದು, ಚಿತ್ರದ ಅದ್ಭುತ ದೃಶ್ಯ ವೈಭವದ ಝಲಕ್ ನೀಡಲಾಗಿತ್ತು. ಆದರೆ ಕಥೆಯ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿರಲಿಲ್ಲ.
ಈಗ ಬಿಡುಗಡೆಯಾಗಲಿರುವ ಟ್ರೇಲರ್‌ನಲ್ಲಿ ಪ್ರಮುಖ ಪಾತ್ರಗಳ ಪರಿಚಯದ ಜೊತೆಗೆ, ರಾಮಾಯಣ ಮಹಾಕಾವ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬೆಳ್ಳಿಪರದೆ ಮೇಲೆ ಹೇಗೆ ಮೂಡಿಸಲಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.
ಪ್ರಮುಖ ತಾರಾಬಳಗ
ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅಭಿನಯಿಸುತ್ತಿದ್ದು, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ರಾಮಾಯಣದ ಮೂಲ ಭಾವನೆಗಳಿಗೆ ಧಕ್ಕೆಯಾಗದಂತೆ, ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಚಿತ್ರವನ್ನು ನಿರ್ಮಿಸಲಾಗಿದೆ.
ಎರಡು ಭಾಗಗಳಲ್ಲಿ ಬಿಡುಗಡೆ
‘ರಾಮಾಯಣ’ ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ಯೋಜಿಸಲಾಗಿದೆ. ನಮಿತ್ ಮಲ್ಹೋತ್ರಾ ಅವರ ನಿರ್ಮಾಣದಲ್ಲಿ, ಆಸ್ಕರ್ ಪ್ರಶಸ್ತಿ ವಿಜೇತ ದೃಶ್ಯ ಪರಿಣಾಮಗಳ ಸಂಸ್ಥೆ DNEG ಹಾಗೂ ಯಶ್ ಅವರ Monster Mind Creations ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ವಿಶ್ವದಾದ್ಯಂತ IMAX ಸೇರಿದಂತೆ ಭಾರೀ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಹಾಗೂ ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗುವ ಯೋಜನೆ ಇದೆ.















