ನವದೆಹಲಿ: ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಒಂದು ವರ್ಷದೊಳಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಹಿಂದಿನ ಆದೇಶದಲ್ಲಿ ತಿದ್ದುಪಡಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ.
ದರ್ಶನ್ ಪರವಾಗಿ ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರುವ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ತಿಳಿಸಿ, ಅದನ್ನು ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲವೆಂದು ರಿಜಿಸ್ಟ್ರಾರ್ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಮೇ 15ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ವಿಜಯ್ ಬಿಷ್ನೋಯಿ ಅವರ ಪೀಠದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಅವರನ್ನು ಜೈಲಿನ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಇತರ ಕೈದಿಗಳೊಂದಿಗೆ ಮಾತನಾಡಲು ಅವಕಾಶವಿಲ್ಲ. ಕುಟುಂಬ ಸದಸ್ಯರನ್ನು ಗಾಜಿನ ತಡೆಗೋಡೆಯ ಮೂಲಕ ಮಾತ್ರ ಭೇಟಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ವಾದ ಮಂಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕ್ವಾರಂಟೈನ್ ಸೆಲ್ ಕೂಡ ಜೈಲಿನ ಭಾಗವೇ ಆಗಿದ್ದು, ವಿಶೇಷ ಸೌಲಭ್ಯ ನೀಡಬಾರದು ಎಂಬ ಉದ್ದೇಶದಿಂದ ಅಲ್ಲಿರಿಸಿರಬಹುದು. ಆದರೆ ಜೈಲು ನಿಯಮಾವಳಿಯ ಪ್ರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿತ್ತು.
ಇದೇ ವೇಳೆ, ವಿಚಾರಣಾ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ಆ ಅವಧಿಯವರೆಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಆದೇಶದಂತೆ, ಮುಂದಿನ ವರ್ಷದ ಮೇ 15ರವರೆಗೆ ದರ್ಶನ್ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಮುಂದುವರಿಯಲಿದೆ.

















