ಜೈಲಿನಲ್ಲಿ ಯೋಗ ಮಾಡಿದ ದರ್ಶನ್, ವೈರಲ್ ಆಯ್ತು ಫೋಟೋ!

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗಾಗಿ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಮತ್ತು ಪವಿತ್ರ ಗೌಡ ಭಾಗವಹಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜೈಲಿನ ಎಲ್ಲಾ ಕೈದಿಗಳಿಗಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಬೆನ್ನು ನೋವಿನ ಸಮಸ್ಯೆ ಇದೆ ಎಂದು ತಿಳಿಸಿದ್ದ ನಟ ದರ್ಶನ್ ಆರಂಭದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಬಳಿಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿ ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಭೇಟಿ ಮಾಡಿ ಯೋಗದ ಆರೋಗ್ಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿದ ಬಳಿಕ ಯೋಗಾಭ್ಯಾಸಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಾಮೂಹಿಕ ಕಾರ್ಯಕ್ರಮಕ್ಕೆ ಹಾಜರಾಗದ ದರ್ಶನ್, ತಮ್ಮ ಬ್ಯಾರಕ್‌ನ ಕಾರಿಡಾರ್‌ನಲ್ಲೇ ಸಹ-ಆರೋಪಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು. ಸುಮಾರು ಒಂದು ಗಂಟೆ ನಡೆದ ಯೋಗಾಭ್ಯಾಸದಲ್ಲಿ ಪ್ರಾಣಾಯಾಮ, ದೀರ್ಘದಂಡ ನಮಸ್ಕಾರ ಹಾಗೂ ಶವಾಸನ ಸೇರಿದಂತೆ ವಿವಿಧ ಆಸನಗಳನ್ನು ಅಭ್ಯಾಸ ಮಾಡಿದರು.

ಇನ್ನೊಂದೆಡೆ, ಪವಿತ್ರಾ ಗೌಡ ಮಹಿಳಾ ಕೈದಿಗಳ ವಿಭಾಗದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತರ ಮಹಿಳಾ ಕೈದಿಗಳೊಂದಿಗೆ ಯೋಗ ಮತ್ತು ಧ್ಯಾನ ಮಾಡಿದರು.

ಕೈದಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯೋಗ ದಿನಾಚರಣೆಯ ಅಂಗವಾಗಿ ಅನೇಕ ಕೈದಿಗಳು ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮ ಅಭ್ಯಾಸಗಳಲ್ಲಿ ಪಾಲ್ಗೊಂಡರು.

ದರ್ಶನ್ ಹಾಗೂ ಪವಿತ್ರಾ ಗೌಡ ವಿರುದ್ಧದ ಆರೋಪಗಳು ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಪ್ರಕರಣದ ಅಂತಿಮ ತೀರ್ಪು ಹೊರಬಂದಿಲ್ಲ.