ಪ್ರಾಕೃತಿಕ ವಿಕೋಪ: ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಸಿ.ಎಂ. ಯಡಿಯೂರಪ್ಪ ನೆರೆ ಹಾನಿಗೆ ಒಳಗಾದ ಎಲ್ಲರಿಗೂ ಮನೆ ಕಟ್ಟಲು ವ್ಯವಸ್ಥೆ ಮಾಡಲಾಗುವುದು. ತಕ್ಷಣ ಸಂತ್ರಸ್ತರಿಗೆ 10 ಸಾವಿರ ರೂ. ನೀಡಬೇಕು. ಮನೆ ಕಟ್ಟಲು 5 ಲಕ್ಷ ರೂ.‌ ನೀಡುತ್ತೇವೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ ಎಂದರು.
ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗದವರಿಗೆ ಐದು ಸಾವಿರ ಬಾಡಿಗೆ ಹಣ ನೀಡಲಾಗುವುದು. ನೆರೆಯಿಂದ ಹಾನಿಗೊಳಗಾದ ಮನೆ ದುರಸ್ಥಿಗೆ ಒಂದು ಲಕ್ಷದವರೆಗೆ ಸಹಾಯ ನೀಡಲಾಗುವುದು ಎಂದು ಬೆಳ್ತಂಗಡಿಯ ಕುಕ್ಕಾವು ಗ್ರಾಮದ ಸಂತ್ರಸ್ತರಿಗೆ ಸಿಎಂ ಭರವಸೆ ನೀಡಿದರು.
ದ.ಕ ಜಿಲ್ಲೆಯಲ್ಲಿ ಒಟ್ಟು ೨೭೪ ಕೋಟಿ ನಷ್ಟ ಅಂತ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಬೋಳುರು, ಹೊಯಿಗೆ ಬಜಾರ್, ಕಣ್ಣೂರು, ಜೆಪ್ಪು ಕುಡ್ಪಾಡಿ, ಜೆಪ್ಪು, ಕುದ್ರೋಳಿ, ಬೋಳಾರ, ಜೆಪ್ಪಿನಮೊಗರು, ಬೊಕ್ಕಪಟ್ಣ, ಮಂಗಳಾದೇವಿ ಸಹಿತ ಕೆಲವು ಪ್ರದೇಶಗಳು ನದಿಭಾಗದ ಸಮೀಪದಲ್ಲಿದ್ದು, ಮಳೆಗಾಲದಲ್ಲಿ ಪ್ರತಿ ಬಾರಿ ನದಿ ಉಕ್ಕಿ ಹರಿದು ಅರ್ಧ ಕಿಲೋ ಮೀಟರ್ ನಷ್ಟು ಒಳಗೆ ನೀರು ಬರುತ್ತದೆ. ಇದರಿಂದ ಮಳೆಗಾಲದಲ್ಲಿ ಆ ಭಾಗದ ಜನ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕಾಗುತ್ತದೆ. ಈ ಬಾರಿ ಇಂತಹ ಜನ ಗಂಜಿ ಕೇಂದ್ರಕ್ಕೆ ಶೀಪ್ಟ್  ಆಗಿದ್ದಾರೆ. ಈ ಬಾರಿ ಮಳೆ ಹೆಚ್ಚಿದ್ದ ಜನ ಕಾರಣ ಇನ್ನಷ್ಟು ತೊಂದರೆಯಾಗಿತ್ತು. ಹೀಗಾಗಿ‌ ಈ ಭಾಗದಲ್ಲಿ ಗೋಡೆಯಂತಹ ವ್ಯವಸ್ಥೆ ಮಾಡಿ ಜನರ ತೊಂದರೆಗೆ ಪರಿಹಾರ ನೀಡಬೇಕಿದೆ.
ಈ ಬಾರಿ ಮಂಗಳೂರಿನಲ್ಲಿ ಡೆಂಗ್ಯೂ ಕಾಯಿಲೆ ಕೂಡ ಜಾಸ್ತಿ ಇತ್ತು. ಬಿಟಿವಿಯ ಕ್ಯಾಮೆರಾಮೆನ್ ನಾಗೇಶ್ ಪಡು ಅವರು ಡೆಂಗ್ಯೂ ಕಾಯಿಲೆಯಿಂದ ಮೃತಪಟ್ಟಿರುವುದಕ್ಕೆ ತಾವು ಐದು ಲಕ್ಷ ಪರಿಹಾರ ಘೋಷಣೆ ಮಾಡಿರುವಂತೆ ಇನ್ನು ಏಳೆಂಟು ಜನ ಈ ಕಾಯಿಲೆಯಿಂದ ಮೃತಪಟ್ಟಿದ್ದು ಅವರಿಗೂ ಪರಿಹಾರ ಧನ ಘೋಷಣೆ ಮಾಡಬೇಕಾಗಿ ಶಾಸಕ ಕಾಮತ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಮನವಿ ಮಾಡಿದರು.
ಶಾಸಕರಾದ ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಯುಟಿ ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಎಸ್ ಅಂಗಾರ, ರಾಜೇಶ್ ನಾಯ್ಕ ಉಪಸ್ಥಿತರಿದ್ದರು.