ಮಹಾಮಸ್ತಕಾಭಿಷೇಕ ನಿಮಿತ್ತ 1.25 ಕೋ.ರೂ.ಗಳ ಜನಮಂಗಲ ಯೋಜನೆ

ಧರ್ಮಸ್ಥಳ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಪೂಜಾ ಕಾರ್ಯಕ್ರಮದ ಭಾಗವಾಗಿ ರವಿವಾರ ಬಾಹುಬಲಿ ಬೆಟ್ಟದಲ್ಲಿ ಮಧ್ಯಾಹ್ನ ಗಂಟೆ 12.35ರ ಅಭಿಜಿನ್‌ ಮುಹೂರ್ತದಲ್ಲಿ ಧ್ವಜಾರೋಹಣ ವಿಧಿ, 54 ಕಲಶಗಳಿಂದ ಪಾದಾಭಿಷೇಕ ಮೊದಲಾದ ವಿಧಿ ವಿಧಾನಗಳು ನೆರವೇರಿದವು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು  ಮಾತನಾಡಿ  ಯಾವುದೇ ಯೋಜನೆ, ಸಹಾಯ ಧನ, ನೆರವು ಪಡೆಯುವ ಮೂಲಕ ಸ್ವಾವಲಂಬಿ ಗಳಾಗಿ ಬದುಕುವ ಮಹಾಪಾಠವನ್ನು ಕಲಿತುಕೊಳ್ಳಬೇಕು. ನೆರವು ಪಡೆದ ಬಳಿಕವೂ ಅವಲಂಬಿತರಾಗುವ ಮನೋಭಾವವನ್ನು ಬದಲಾವಣೆ ಮಾಡಬೇಕಿದೆ ಎಂದು ರವಿವಾರ ನಡೆದ ಜನ ಮಂಗಲ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಸಹಾಯಕರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಶ್ರೀ ಕ್ಷೇತ್ರ ಧರ್ಮಸ್ಥಳವು ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳ ಮೂಲಕ ನೆರವಾಗುವ ಕಾರ್ಯವನ್ನು ನಡೆಸುತ್ತ ಬಂದಿದೆ. ನೆರವು ಪಡೆದ ವರು ಅದನ್ನು ಪರಿಪೂರ್ಣ ನೆಲೆ ಯಲ್ಲಿ ವಿನಿಯೋಗಿಸಬೇಕು. ಆ ಮೂಲಕ ಸ್ವಾವಲಂಬಿ ಜೀವನಕ್ಕೆ ಮುಂದಾಗಬೇಕು ಎಂದವರು ಆಶಿಸಿದರು.

ಮಹಾಮಸ್ತಕಾಭಿಷೇಕ ನಿಮಿತ್ತ 1.25 ಕೋ.ರೂ.ಗಳ ಜನಮಂಗಲ ಯೋಜನೆ

ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ವತಿಯಿಂದ ಜನಮಂಗಲ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಟ್ಟು 1.25 ಕೋ.ರೂ. ಮೌಲ್ಯದ ವಿವಿಧ ಸಲಕರಣೆಗಳನ್ನು ಹಸ್ತಾಂತರಿಸಲಾಯಿತು. ಒಟ್ಟು 560 ಜನ ಅಂಗವಿಕಲರಿಗೆ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಗಾಲಿಕುರ್ಚಿ, 400 ಜನ ಅಂಗವಿಕಲರಿಗೆ ವಾಕರ್‌ ಸೌಲಭ್ಯ, 110 ವಾಕಿಂಗ್‌ ಸ್ಟಿಕ್‌ ಹಾಗೂ ವಾಟರ್‌ ಬೆಡ್‌ ಹಸ್ತಾಂತರಿಸಲಾಯಿತು. ಜ.1ರಿಂದ ಮಾ.31ರ ವರೆಗೆ ಟ್ಯಾಕ್ಸಿ, ರಿಕ್ಷಾ ಸೇರಿದಂತೆ ಸಾಗಾಟ ವಾಹನ ಖರೀದಿ ಮಾಡುವವರಿದ್ದರೆ ಅವರಿಗೆ ಕ್ಷೇತ್ರದ ವತಿಯಿಂದ 10,000 ರೂ.ಗಳ ಅನುದಾನ ನೀಡಲಾಗುತ್ತದೆ. ಇದರಂತೆ ಇಲ್ಲಿಯ ವರೆಗೆ ನೋಂದಣಿ ಮಾಡಿದ 626 ಜನರಿಗೆ ತಲಾ 10,000 ರೂ.ಗಳ ನೆರವು ನೀಡಲಾಯಿತು.