ನವದೆಹಲಿ: ಕ್ರೈಸ್ತ, ಇಸ್ಲಾಮ್ ಗಳಿಗೆ ಮತಾಂತರವಾಗುವ ದಲಿತರಿಗೆ ಮೀಸಲಾತಿಯಡಿಯಲ್ಲಿ ಇರುವ ಯಾವ ಸೌಲಭ್ಯವೂ ಸಿಗುವುದಿಲ್ಲ. ಹಾಗೆ ಅವರು ಮೀಸಲು ಕ್ಷೇತ್ರಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಹಿಂದೂ, ಸಿಖ್, ಬೌದ್ಧ ಮತಗಳನ್ನು ಅನುಸರಿಸುವ ದಲಿತರನ್ನು ಹೊರತುಪಡಿಸಿ, ಕ್ರೈಸ್ತ, ಮುಸಲ್ಮಾನರಾಗಿ ಮತಾಂತರ ಹೊಂದುವ ದಲಿತರಿಗೆ ಮೀಸಲಾತಿಯ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನದ ಪ್ಯಾರಾ 3 ರನ್ನು (ಪರಿಶಿಷ್ಟ ಜಾತಿಗಳು) ಉಲ್ಲೇಖಿಸಿರುವ ಸಚಿವರು, ದಲಿತರು ಹಿಂದೂ, ಸಿಖ್, ಬೌದ್ಧ ಧರ್ಮಗಳನ್ನು ಅನುಸರಿಸಿದರೆ ಅವರನ್ನು ಪರಿಶಿಷ್ಟ ಜಾತಿಯ ಸದಸ್ಯರೆಂದೇ ಗುರುತಿಸಲಾಗುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.