ದಕ್ಷಿಣ ಕನ್ನಡ: 60 ಕಿ.ಮೀಗೆ 3 ಟೋಲ್‌, ಸದ್ಯದಲ್ಲೇ ಬರುವುದಂತೆ ಇನ್ನೂ 3 ಟೋಲ್

Dakshina Kannada ಜಿಲ್ಲೆಯಲ್ಲಿ ಟೋಲ್‌ಗೇಟ್‌ಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಈಗಾಗಲೇ ಕೇವಲ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ 3 ಟೋಲ್‌ಗೇಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮತ್ತೂ 3 ಟೋಲ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಪ್ರಕಾರ, ಒಂದು ಟೋಲ್‌ಗೇಟ್‌ನಿಂದ ಮತ್ತೊಂದಕ್ಕೆ ಕನಿಷ್ಠ 60 ಕಿ.ಮೀ ಅಂತರ ಇರಬೇಕು. ಆದರೆ ಇಲ್ಲಿ ಆ ನಿಯಮವೇ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಿಂದ ಕೇವಲ 30 ಕಿ.ಮೀ ದೂರದಲ್ಲಿ ತಲಪಾಡಿ ಟೋಲ್‌ಗೇಟ್‌ ಮತ್ತು 42 ಕಿ.ಮೀ ಅಂತರದಲ್ಲಿ ಹೆಜಮಾಡಿ ಟೋಲ್‌ಗೇಟ್‌ ಇರುವುದರಿಂದ ಅಂತರ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪವಿದೆ‌.

ಇದರ ನಡುವೆ ವಳಾಲು, ಪಣಕಜೆ ಮತ್ತು ಗಂಜಿಮಠದಲ್ಲಿ ಹೊಸ ಟೋಲ್‌ಗೇಟ್‌ಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಇವು ಕೂಡ ಆರಂಭವಾದರೆ, ಜಿಲ್ಲೆಯೊಂದರಲ್ಲೇ ಒಟ್ಟು 6 ಟೋಲ್‌ಗೇಟ್‌ಗಳು ಕಾರ್ಯನಿರ್ವಹಿಸುವ ಪರಿಸ್ಥಿತಿ ಉಂಟಾಗಲಿದೆ.