ಕಣ್ಮರೆಯಾಗಿರುವ ಮೀನುಗಾರರು ಉತ್ತರ ಭಾಗದಲ್ಲಿದ್ದಾರೆ: ಇದು ದೈವದ ನುಡಿ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟು ಕಳೆದ 25 ದಿನಗಳಿಂದ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ಪ್ರಾಣಕ್ಕೆ ಯಾವುದೇ ಅಪಾಯ ಆಗಿಲ್ಲ. ಅವರೆಲ್ಲರೂ ಉತ್ತರ ಭಾಗದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಬೊಬ್ಬರ್ಯ ದೈವದ ನುಡಿಗಟ್ಟಿನಲ್ಲಿ ತಿಳಿದುಬಂದಿದೆ.
ಡಿಸೆಂಬರ್ 13ರಂದು ಮೀನುಗಾರಿಕೆ ತೆರಳಿದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್ ಹಾಗೂ ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದರು. ಈ ವೇಳೆ ದೈವದ ಪಾತ್ರಿ ಅವರೆಲ್ಲರೂ ದೇಶದ ಉತ್ತರ ಭಾಗದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ನುಡಿಗಟ್ಟನ್ನು ನೀಡಿದ್ದಾರೆ ಎನ್ನಲಾಗಿದೆ.
ದೈವ ಹೇಳಿದ್ದೇನು.?
ಉಡುಪಿಯ ಮಲ್ಪೆ ಸಮೀಪದ ಬಡಾನಿಡಿಯೂರಿನಲ್ಲಿರುವ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆದ ದರ್ಶನ ಸೇವೆಯ ಸಂದರ್ಭದಲ್ಲಿ ಕಣ್ಮರೆಯಾದ ಮೀನುಗಾರರು ದೇಶದ ಉತ್ತರ ಭಾಗದಲ್ಲಿದ್ದಾರೆ. ಮೀನುಗಾರರಿಂದ ಅವರನ್ನು ಪತ್ತೆ ಮಾಡುವುದು ಅಸಾಧ್ಯ. ಪೊಲೀಸರು, ಸೈನ್ಯದಿಂದ ಮಾತ್ರ ಅವರನ್ನು ಪತ್ತೆ ಹಚ್ಚಬಹುದು. ಅವರು ದಟ್ಟ ಪೊದೆಗಳ ಮಧ್ಯೆ ಕಣ್ಮರೆಯಾಗಿದ್ದಾರೆ. 6-7 ದಿನದೊಳಗೆ ಅವರ ಸುಳಿವು ಪತ್ತೆಯಾಗಲಿದೆ. ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕು ಎಂದು ದೈವ ಬೊಬ್ಬರ್ಯ ಪಾತ್ರಿ ನುಡಿ ಕೊಟ್ಟಿದ್ದಾರೆ.
ಉತ್ತರ ಭಾಗದಲ್ಲಿ ಇದ್ದಾರೆಂದು ದೈವದ ನುಡಿಯಲ್ಲಿ ತಿಳಿದುಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಡಗೌಡ, ಸ್ಪಷ್ಟವಾಗಿ ಯಾವ ಕಡೆ ಹೇಳಿದರೆ ಹುಡುಕಾಟ ನಡೆಸುತ್ತೇವೆ. ಉತ್ತರ ಅಥವಾ ದಕ್ಷಿಣ ಕಡೆ ಇದೆ ಎಂದು ಹೇಳಿದರೆ ಅಸಾಧ್ಯ. ದೇವರ ಮೇಲೆ ನನಗೂ ನಂಬಿಕೆ ಇದೆ. ಆದರೆ ಶೋಧ ಕಾರ್ಯಕ್ಕೆ ಎಲ್ಲಿದ್ದಾರೆ ಎಂಬ ಸ್ಪಷ್ಟತೆ ಬೇಕು. ನೀವು ಯಾವುದೇ ಸಲಹೆ ಕೊಟ್ಟರೂ ಅದನ್ನು ಸ್ವೀಕರಿಸಲು ನಾವು ಸಿದ್ಧ ಎಂದರು.