ಧಾರಾವಾಹಿಯಲ್ಲಿ ದೈವಾರಾಧನೆಯ ದೃಶ್ಯ: ಪ್ರಕರಣ ದಾಖಲಿಸಲು ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಒತ್ತಾಯ

ಮಂಗಳೂರು: ತುಳುನಾಡಿನ ಕಟ್ಟುಕಟ್ಟಳೆಯಾದ ದೈವಾರಾಧನೆಯ ಹಿನ್ನೆಲೆಯಿರುವ ಚಿತ್ರಗಳು, ಕಿರುಚಿತ್ರಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಿದ್ದು ಇದೀಗ ಧಾರಾವಾಹಿಯಲ್ಲೂ ದೈವಾರಾಧನೆಯ ದೃಶ್ಯಗಳನ್ನು ಅಳವಡಿಸಿಕೊಂಡಿರುವುದು ತುಳುವರ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮಿಡಿಯಂ ಧಾರವಾಹಿಯ ಪ್ರೋಮೋ ರೀಲಿಸ್ ಆಗಿದ್ದು, ಅದರಲ್ಲಿ ದೈವಾರಾಧನೆಯ ಕುರಿತ ವಿಡಿಯೋ ಶೂಟಿಂಗ್ ಆಗಿದೆ. ಇದಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ.

ದೈವಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕಲಾವಿದ ಮಂಗಳೂರಿನ ಪ್ರಶಾಂತ್ ಸಿ.ಕೆ ಹಾಗೂ ಧಾರವಾಹಿ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಿಸಲು ದೈವಾರಾಧಕರು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಧಾರವಾಹಿ ತೆರೆ ಮೇಲೆ ಬರಬಾರದೆಂದು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ದೈವಸ್ಥಾನದಲ್ಲಿ ಕೋಲ ಇದೆ ಎಂದು ದೇವಸ್ಥಾನದ ಬ್ಯಾಂಡ್ ವಾದ್ಯದವರನ್ನು ಕರೆಸಿದ್ದಾರೆ ಎಂದು ದೈವಾರಾಧಕರ ವೇದಿಕೆ ಧಾರವಾಹಿ ತಂಡದ ಮೇಲೆ ಆರೋಪ ಮಾಡಿದೆ.

ದೈವಾರಾಧನೆ ನಮ್ಮ ಸಮಾಜದ ಕರ್ತವ್ಯ. ಸೀಮಿತ ಸಮಾಜದವರು ಮಾತ್ರ ದೈವ ನರ್ತನ ಮಾಡಬೇಕು. ಈಗ ಛದ್ಮವೇಷದಂತೆ ಪ್ರತಿಯೊಬ್ಬರೂ ವೇಷ ಹಾಕಿಕೊಂಡು‌ ಹಣ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳಿಂದ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನಿಮಾ, ಧಾರವಾಹಿ, ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸಲ್ಲದು. ನಾವು ಆ ರೀತಿಯ ಪ್ರದರ್ಶನಗಳಿಗೆ ಅವಕಾಶ ಕೊಡುವುದಿಲ್ಲ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ಸಿನಿಮಾ, ಧಾರವಾಹಿ ಯಾವುದರಲ್ಲೂ ದೈವಾರಾಧನೆಯನ್ನು ಬಳಸಿಕೊಳ್ಳಬಾರದು. ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನ ನಡೆಸುತ್ತೇವೆ ಎಂದು ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಧಾರವಾಹಿಯಲ್ಲಿ ದೈವದ ಪಾತ್ರ ನಿರ್ವಹಿಸಿದ ಕಲಾವಿದ ಪ್ರಶಾಂತ್ ಸಿಕೆ ಅವರು ಕರಾವಳಿಗರ ಕ್ಷಮೆ ಕೇಳಿದ್ದು, ಕಲಾವಿದನಾಗಿ ನಾನು ಅದರಲ್ಲಿ ನಟಿಸಿದ್ದೆ, ಇನ್ನು ಮುಂದೆ ಈ ರೀತಿಯ ಯಾವುದೇ ದೈವಾರಾಧನೆಗೆ ಸಂಬಂಧಿಸಿದ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.