ಹಾಲು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಜ.19 ರಂದು ಹೈನುಗಾರರಿಂದ ಪ್ರತಿಭಟನೆ

ಉಡುಪಿ: ಸಹಕಾರ ಸಂಘಗಳ ಪ್ಯಾನ್-ಇಂಡಿಯಾ ಎನ್.ಜಿ.ಒ ಸಹಕಾರ ಭಾರತಿ ಬ್ಯಾನರ್ ಅಡಿಯಲ್ಲಿ ಹೈನುಗಾರರು, ಜ.19 ರಂದು ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮುಂಭಾಗದಲ್ಲಿ ಲೀಟರ್ ಹಾಲಿನ ಖರೀದಿ ದರವನ್ನು 2 ರೂ ನಿಂದ ಹೆಚ್ಚಿಸಿ ಕನಿಷ್ಠ 5 ರೂಗೆ ಏರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ಹಾಲು ಮಹಾಮಂಡಳವು ಲೀಟರ್ ಹಾಲು ಬೆಲೆಯನ್ನು 3 ರೂಗೆ ಹೆಚ್ಚಳ ಮಾಡಲು ಕೋರಿಕೊಂಡಿದ್ದವು, ಆದರೆ ಸರಕಾರ ಕೇವಲ 2 ರೂ ಹೆಚ್ಚಳ ಮಾಡಲು ಪ್ರಸ್ತಾಪಿಸಿತ್ತು. ಸರ್ಕಾರದ ಈ ನಿರ್ಧಾರದಿಂದ ರೈತರು ಅಸಮಾಧಾನಗೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದ್ದಾರೆ.

ಪ್ರತಿ ವರ್ಷ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಹೈನುಗಾರರ ಉತ್ಪನ್ನಗಳಿಗೆ ಸೂಕ್ತ ಬೆಲೆ ಬೇಕಾಗಿದೆ. ಹಾಲಿನ ಸಂಗ್ರಹಣೆ ಬೆಲೆಯಲ್ಲಿ 5 ರೂ ಹೆಚ್ಚಳದ ಜೊತೆಗೆ, ಜಾನುವಾರು ಮೇವಿನ ಬೆಲೆ ಹೆಚ್ಚಾಗಿರುವುದರಿಂದ ರೈತರು ದನಗಳ ಮೇವಿಗೆ ಪ್ರತಿ ಕೆಜಿ ಗೆ 5 ರೂ ಸಬ್ಸಿಡಿಯನ್ನು ಬಯಸುತ್ತಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೇವು, ಕೂಲಿ ಶುಲ್ಕ, ಒಣಹುಲ್ಲು, ಔಷಧಗಳ ಬೆಲೆಯಲ್ಲಿ ಏರಿಕೆಯಾಗಿರುವುದು ಹೈನುಗಾರರನ್ನು ಸಂಕಷ್ಟಕ್ಕೆ ದೂಡಿದೆ. ಹೈನುಗಾರರಿಗೆ ಯಾವುದೇ ಬೆಂಬಲ ನೀಡದ ಕಾರಣ, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಆರ್ಥಿಕ ನಷ್ಟದಿಂದ ಬಳಲುತ್ತಿವೆ. ಸರಕಾರ ರೈತರನ್ನು ಬೆಂಬಲಿಸದಿದ್ದರೆ ಹೈನುಗಾರಿಕೆಗೆ ತೀವ್ರ ತೊಂದರೆಯಾಗಲಿದೆ ಎಂದ ಅವರು ಹೈನುಗಾರರಿಗೆ ಸೂಕ್ತ ಸೇವೆ ಸಲ್ಲಿಸಲು ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈನುಗಾರರಿಗೆ ಸಹಾಯ ಮಾಡಲು ವಿಶೇಷ ಒತ್ತು ನೀಡಬೇಕು ಮತ್ತು ಈ ಉದ್ದೇಶಕ್ಕಾಗಿ ವಿಶೇಷ ಅನುದಾನ ನೀಡಬೇಕು ಎಂದು ಸಹಕಾರ ಭಾರತಿ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.