ಕಲೆಗಾಗಿ ತುಡಿಯುವ ಮನಗಳು ಕಲಾವಿದರಿಗಾಗಿ ಮಿಡಿಯಲಿ 

ಪರಶುರಾಮ ಸೃಷ್ಟಿಯ ಪುಣ್ಯದ ಭೂಮಿ ಕರಾವಳಿಯಲ್ಲಿ ಯಕ್ಷಗಾನ ಕಲೆ ದೇವ ಕಲೆಯಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಳಗಳು ಆರು ತಿಂಗಳು ನಿತ್ಯ ಯಕ್ಷಪ್ರದರ್ಶನವನ್ನು  ನೀಡಿ ಪ್ರೇಕ್ಷಕ ಮಹಾಶಯನ ಮನತಣಿಸುತ್ತವೆ ಹಾಗೂ ಯಕ್ಷಾಭಿಮಾನಿಗಳು ಕಗ್ಗತ್ತಲ ರಾತ್ರಿಗಳಲ್ಲಿ ಕಿಲೋ ಮೀಟರ್ಗಟ್ಟಲೆ  ಸುತ್ತಾಡಿ ಯಕ್ಷ ಪ್ರದರ್ಶನವನ್ನು ನೋಡಿ ಖುಷಿಪಡುತ್ತಾರೆ.  ಕಲೆಯೊಂದು ಕರಾವಳಿಗನ ಮನಸ್ಸು-ನರನಾಡಿಗಳಲ್ಲಿ ಆಳವಾಗಿ ಬೇರೂರಿರುವುದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.
  ಅದೇ ರೀತಿ ಯಕ್ಷಗಾನ ಇಷ್ಟೊಂದು ಶ್ರೀಮಂತವಾಗಿ ಬೆಳೆಯಲು ಪ್ರಮುಖ ಕಾರಣ ಕಲಾವಿದರುಗಳ ಪರಿಶ್ರಮ.  ಅರ್ಧ ವರ್ಷವನ್ನು ಪ್ರಕೃತಿಗೆ ವಿರುದ್ಧವಾಗಿ ನಿದ್ದೆಯಿಲ್ಲದೆ ಕಳೆದು. ಮುದ್ದಿನ ಮಡದಿ, ಬೆಣ್ಣೆಯ ಮುದ್ದೆಯಂತಹ ಮಗು, ಪ್ರೀತಿಯ ಅಪ್ಪ-ಅಮ್ಮ ಹೀಗೆ ತನ್ನ  ಕುಟುಂಬ, ಆರೋಗ್ಯ, ನೆಮ್ಮದಿ ಎಲ್ಲವನ್ನೂ ಬಲಿಕೊಟ್ಟು  ಬಣ್ಣದ ಬದುಕಿನ ಪಡಸಾಲೆಯಲ್ಲಿ  ರಾಜನಾಗಿ, ದೇವನಾಗಿ ಮೆರೆದಾಡುವ  ಕಲಾವಿದನ ಪರಿಶ್ರಮ ನಿಜಕ್ಕೂ ಬಹಳಷ್ಟು ದೊಡ್ಡದು.
 ಹೀಗೆ ಮೊನ್ನೆ  ಹೊನ್ನಾವರ ಸಮೀಪದ ಆ ಊರಿನಲ್ಲಿ ಹಗಲು ಕಳೆದು ಕತ್ತಲೆ ಆವರಿಸಿತ್ತು. ಆದರೆ  ದೀವಟಿಗೆಯ ಪ್ರಕಾಶ, ವಿದ್ಯುತ್ ದೀಪದ ಪ್ರಕರತೆ ಸುತ್ತಲು ಹಬ್ಬಿದ ಕತ್ತಲೆಯನ್ನು ಬಡಿದೋಡಿಸಿ ಬೆಳಕಿನ ರಂಗುಚೆಲ್ಲಿತ್ತು. ಸುಂದರ ಬಯಲಿನಲ್ಲಿ ರಂಗಸ್ಥಳವೆನ್ನುವುದು ಅರಮನೆಯಂತೆ ಎದ್ದುನಿಂತಿತ್ತು. ಚೌಕಿಯಲ್ಲಿ  ಚಿನ್ನ, ವಜ್ರ,ವೈಡೂರ್ಯಗಳಿಗೆ  ಸವಾಲೆಸೆಯುವಂತೆ ಯಕ್ಷಾಭರಣಗಳು ಮಿರಿ-ಮಿರಿ ಮಿನುಗುತ್ತಿದ್ದವು.  ಒಟ್ಟಾರೆ ಅಲ್ಲಿ ರಾತ್ರಿಯ ಕತ್ತಲೆಯನ್ನು ಮರೆಮಾಚಿ ಯಕ್ಷಲೋಕ ಧರೆಗಿಳಿಯುವ ತವಕದಲ್ಲಿತ್ತು. ಊರಿನ ಜನರ ಕಣ್ಮನಗಳು ಯಕ್ಷವೈಭವವನ್ನು ಕಣ್ತುಂಬಿಕೊಳ್ಳುವ ಸಡಗರದಲ್ಲಿದ್ದವು. ಆದರೆ ಅಂದು ವಿಧಿಯ ಸಂಕಲ್ಪವೇ ಬೇರೆಯಾಗಿತ್ತು… ಯಕ್ಷ ಮಂದಿರದಲ್ಲಿ  ವಿಜ್ರಂಭಿಸುವ ಧಾವಂತದಿಂದ ಓಡೋಡಿ ಬರುತ್ತಿದ್ದ  ಪ್ರಸನ್ನ ಆಚಾರ್ಯ, ದಿನೇಶ್ ಹೆನ್ನಾಬಲು ಎನ್ನುವ  ಕಲಾಮಾತೆಯ ಕುಸುಮಗಳು ವಿಧಿಯ ಕ್ರೂರ ಲೀಲೆಗೆ ಸಿಲುಕಿ ರಸ್ತೆ ಅಪಘಾತಕ್ಕೆ  ಬಲಿಯಾಗಿದ್ದರು. ಆ ಕ್ಷಣ ರಂಗಸ್ಥಳದ ಎಡಬಲದಲ್ಲಿ ಹಚ್ಚಿತ್ತ  ಯಕ್ಷದೀವಿಗೆ ಸದ್ದಿಲ್ಲದೆ ಆರಿಹೋಗಿ ಸುತ್ತಲೂ ಕತ್ತಲು ಆವರಿಸತೊಡಗಿತು. ಯಕ್ಷದೇವಿ ತನ್ನೆರಡು ಕಂದಮ್ಮಗಳನ್ನು ಕಳೆದುಕೊಂಡ  ಸೂತಕದಲ್ಲಿ ಪರಿತಪಿಸುತ್ತಿದ್ದಳು. ಇದಕ್ಕಿಂತ ಸ್ವಲ್ಪ ದಿನಗಳ ಮೊದಲು ಕೋಟೇಶ್ವರದಲ್ಲೂ ಇಂತಹದ್ದೇ ದುರ್ಘಟನೆ ನಡೆದು ರವಿರಾಜ್ ಜನ್ಸಾಲೆ ಎಂಬ ಕಲಾಕುಸುಮ ಅರಳುವ ಮುನ್ನವೇ ಬಾಡಿ ಹೋಗಿತ್ತು.
ಹೌದು ಬಹುತೇಕ ಕಲಾವಿದರ ಜೀವನವೇ ಹಾಗೆ   ಪ್ರತಿ ರಾತ್ರಿ ರಂಗದಲ್ಲಿ ಕುಬೇರ, ಧರ್ಮರಾಯನಾಗಿ ಮಿಂಚಿದರೂ ನಿಜ ಜೀವನದಲ್ಲಿ ಮಾತ್ರ ಕುಚೇಲರು. ಈ ಮೂವರು ಕಲಾವಿದರ ಪರಿಸ್ಥಿತಿ ಕೂಡ ಅದೇ ರೀತಿಯಾಗಿತ್ತು. ಚಿಕ್ಕ ಗುಡಿಸಲು, ಕಿತ್ತು ತಿಣ್ಣುವ ಬಡತನವೇ ಇವರ ಪಾಲಿನ ಬಹು ದೊಡ್ಡ ಆಸ್ತಿ. ಆದರೆ ರಾತ್ರಿಯ ಬಣ್ಣದ ಬೆಡಗಿನ ಮುಂದೆ ಬಡತನವೆಂಬ ಕೊರಗು ಮರೆಮಾಚಿತ್ತು.
  ಮನೆಗೆ ಆಧಾರವಾಗಿ, ಮುಪ್ಪಿನಲ್ಲಿ ಊರುಗೋಲಿನಂತಿರಬೇಕಿದ್ದ  ಮಕ್ಕಳ ಅಗಲಿಕೆ ಆ  ಬಡಕುಟುಂಬಕ್ಕೆ  ಮಾನಸಿಕ ಆಘಾತ, ತುಂಬಲಾರದ ನಷ್ಟ ತಂದಿದೆ. ಅವರ ಬದುಕಿನಲ್ಲಿ  ಬರಿ ಶೂನ್ಯವೇ ಆವರಿಸಿ ಬಿಟ್ಟಿದೆ.  ಹೀಗಾಗಿ ದುಃಖದಲ್ಲಿರುವ  ಈ ಕುಟುಂಬಗಳಿಗೆ ಈಗ ಒಂದಷ್ಟು  ಸಾಂತ್ವಾನ ಬೇಕಿದೆ. ಈ ನಿಟ್ಟಿನಲ್ಲಿ  ಸಮಾನ ಮಾನಸ್ಕ  ಕರಾವಳಿ ಯಕ್ಷಸಂಘಟಕರು ಒಟ್ಟಾಗಿ ಫೆ.೩ ರಂದು ರಾತ್ರಿ ೮.೩೦ರಿಂದ  ಕೋಟೇಶ್ವರದಲ್ಲಿ ದಾನದೀವಿಗೆ ಎನ್ನುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಅಂದು ಯಕ್ಷಗಾನ ಇತಿಹಾಸದಲ್ಲೇ ಪ್ರಥಮ ಬಾರಿಗೆ ನೂರಾರು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ  ಅಪರೂಪದ ಆಟವನ್ನು ಆಯೋಜಿಸಿದ್ದಾರೆ   ಹಾಗೂ ಅಲ್ಲಿ ಸಂಗ್ರಹವಾಗುವ ಹಣವನ್ನು ಈ ಮೂವರ ಕುಟುಂಬಗಳಿಗೆ ತಲುಪಿಸಲಿದ್ದಾರೆ.
 ಪ್ರೀತಿಯ ಯಕ್ಷಾಭಿಮಾನಿಗಳಲ್ಲಿ ಒಂದು ವಿಜ್ಞಾಪನೆ  ಯಕ್ಷಗಾನವೆಂದರೆ ತುಡಿಯುವ, ಕಲೆಗಾಗಿ ಹಾತೊರೆಯುವ ನಮ್ಮ ಮನ ಇದೀಗ ಕಲಾವಿದರಾಗಿ ಒಂದಷ್ಟು  ಮಿಡಿಯಬೇಕಿದೆ. ಈ ಮೂಲಕ ನಮ್ಮ ಕೈಲಾದ ಸಹಕಾರವನ್ನು ಕುಟುಂಬಕ್ಕೆ ನೀಡಬೇಕಿದೆ. ಸಹಾಯ ಮಾಡುಬಯಸುವವರು ಕರ್ಣಾಟಕ ಬ್ಯಾಂಕ್ ಗೋಳಿಯಂಗಡಿ – ಹಿಲಿಯಾಣ ಶಾಖೆಯ ದಾನದೀವಿಗೆ ಖಾತೆ ಸಂಖ್ಯೆ  2742500100354101,  IFSC : KARBOOOO274  ಇದಕ್ಕೂ ಹಣ ಜಮಾ ಮಾಡಬಹುದು. ನಾವೆಲ್ಲ ಸೇರಿ ಈ  ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ. ಎಲ್ಲಾ ಕಲಾವಿದರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ  ಆತ್ಮಸ್ಥೈರ್ಯ ತುಂಬವ.
                                                                                   -ರಾಜೇಶ್ ಗಾಣಿಗ ಅಚ್ಲಾಡಿ