ಜೂ. 3 ರಂದು ನೂತನ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಬಹುದಿನಗಳ ಕುತೂಹಲಕ್ಕೆ ತೆರೆ ಬೀಳುವ ಸಮಯ ನಿಗದಿಯಾಗಿದ್ದು ಡಿಕೆ ಶಿವಕುಮಾರ್ D. K. Shivakumar ಅವರು ಜೂನ್ 3ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣವಚನ ಸಮಾರಂಭವು ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಸರಳವಾಗಿ ನಡೆಯಲಿದ್ದು, ಯಾವುದೇ ಅದ್ಧೂರಿ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ರಾಜಭವನ ಆವರಣದಲ್ಲೇ ನಡೆಸಲು ತೀರ್ಮಾನಿಸಲಾಗಿದೆ.

ಮೊದಲಿಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಭವ್ಯ ಸಾರ್ವಜನಿಕ ಸಮಾರಂಭ ನಡೆಸುವ ಬಗ್ಗೆ ಚರ್ಚೆಯಾಗಿದ್ದರೂ, ಸಾವಿರಾರು ಜನರನ್ನು ಬೆಂಗಳೂರಿಗೆ ಕರೆತರುವ ಯೋಜನೆಯನ್ನೂ ಕೈಬಿಡಲಾಗಿದೆ. ಸರ್ಕಾರದ ಹಣದ ಮಿತವ್ಯಯ ಹಾಗೂ ಸರಳ ಆಡಳಿತದ ಸಂದೇಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಅಧಿಕೃತವಾಗಿ ನಾಯಕನಾಗಿ ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಅವರ ನೇತೃತ್ವದಲ್ಲಿ ಹೊಸ ಸಚಿವ ಸಂಪುಟದ ರಚನೆಗೆ ಸಂಬಂಧಿಸಿದ ಚರ್ಚೆಗಳು ಕೂಡ ಆರಂಭವಾಗಿವೆ. ಕೆಲವು ಸಚಿವರು ಕೂಡ ಜೂನ್ 3ರಂದೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಹಾಗೂ ಜ್ಯೋತಿಷ್ಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಜೂನ್ 3ರ ದಿನಾಂಕ ಆಯ್ಕೆಯಾಗಿದ್ದು, ಸಂಜೆ ವೇಳೆಯಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.