ಬಸ್‌ಗಳಲ್ಲಿ ಸೈಕಲ್: ನೂತನ ವ್ಯವಸ್ಥೆಗೆ ಚಿಂತನೆ: ಸಚಿವ ಲಕ್ಷ್ಮಣ ಸವದಿ

ರಾಯಚೂರು: ಸರ್ಕಾರಿ ಬಸ್ಸುಗಳಲ್ಲಿ ಸೈಕಲ್‌ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಲು ಚಿಂತಿಸಲಾಗಿದೆ. ಆ ನಿಟ್ಟಿನಲ್ಲಿ ಬಸ್‌ಗಳ ಮುಂದೆ ಹಾಗೂ ಹಿಂಭಾಗದಲ್ಲಿ ಸೈಕಲ್ ಅಳವಡಿಸಲು ಅಗತ್ಯವಿರುವ ಸ್ಟ್ಯಾಂಡ್ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದ ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗೋಷ್ಠಿ ಮಾಹಿತಿ ನೀಡಿದರು. ಪ್ರಾಯೋಗಿಕವಾಗಿ ಇದನ್ನು ಮೊದಲು ಬೆಂಗಳೂರಿನಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಸೈಕಲ್ ಸಂಚಾರಿಗಳು ಬಸ್ ನಿಲ್ದಾಣಕ್ಕೆ ಬಂದು ಬಸ್‌ಗಳಲ್ಲಿ ಅಳವಡಿಸಲಾಗುವ ಸೈಕಲ್ ಸ್ಟ್ಯಾಂಡ್‌ಗಳಲ್ಲಿ ಸೈಕಲ್‌ಅನ್ನು ತೂಗುಹಾಕಬಹುದು. ನಂತರ ಅವರು ಸೈಕಲ್ ಹಾಗೂ ತಮಗೂ ಟಿಕೇಟ್ ಪಡೆದು ತಮ್ಮ ಮುಂದಿನ ನಿಲ್ದಾಣದ ವರೆಗೂ ಸಂಚರಿಸಬಹುದಾದ ವ್ಯವಸ್ಥೆ. ಬಸ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿ ತಲಾ ಎರಡೆರಡು ಸೈಕಲ್‌ಗಳನ್ನು ಅಳವಡಿಸಲಾಗುವುದು. ಇದರ ಸಾಧಕ ಬಾಧಕ ನೋಡಿಕೊಂಡು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.
ಕೋವಿಡ್-19 ನಿಂದಾಗಿ ಅತೀ ಹೆಚ್ಚು ನಷ್ಟವನ್ನು ಸಾರಿಗೆ ಇಲಾಖೆ ಅನುಭವಿಸಿದೆ.
27 ಸಾವಿರ ಕೋಟಿ ರೂಪಾಯಿಗಳು ಇಲಾಖೆಗೆ ನಷ್ಟ ಆಗಿದೆ. ಕೊರೊನಾಗೂ ಮುಂಚೆ ಪ್ರತಿದಿನ ಒಂದು ಕೋಟಿ ಜನರು ಪ್ರಯಾಣಿಸುತ್ತಿದ್ದರು, ಈಗ 37 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಸಾರಿಗೆ ಇಲಾಖೆಯ ಸಿಬ್ಬಂದಿಗೆ ವೇತನ ಕಡಿತ ಮಾಡಿಲ್ಲ ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಕೋರಿಯರ್ ಸರ್ವಿಸ್ ಆರಂಭಿಸಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳ ನೇಮಕಾತಿ ಪ್ರಕ್ರಿಯೆಗಳು ವಿಳಂಬಗೊಂಡಿವೆ. ಆ ನೇಮಕಾತಿಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.