ಅಕ್ಟೋಬರ್ 28 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಏಕಕಂಠದಲ್ಲಿ ಕೋಟಿ ಕಂಠ ಗಾಯನ

ಉಡುಪಿ: ಈ ಬಾರಿಯ 67 ನೇ ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಸಂಭ್ರಮ, ಉತ್ಸಾಹದಿಂದ ಅತ್ಯಂತ ವಿಶಿಷ್ಠವಾಗಿ ಆಚರಿಸಲು ಉದ್ದೇಶಿಸಿದ್ದು, ಒಂದು ಕೋಟಿಗೂ ಹೆಚ್ಚು ಜನರಿಂದ ಏಕ ಕಾಲದಲ್ಲಿ ಏಕ ಕಂಠದಲ್ಲಿ ಆಯ್ದ 6 ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಕ್ಟೋಬರ್ 28 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ನಡೆಯುವ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮಲ್ಪೆಯ ಸಮುದ್ರ ಮಧ್ಯದಲ್ಲಿ ಸುಮಾರು 130 ಬೋಟುಗಳಲ್ಲಿ 4000 ಜನರೊಂದಿಗೆ ನಡೆಯಲಿದೆ.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್ ಬ್ಯಾಂಡ್ ನೊಂದಿಗೆ 5000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಮಣಿಪಾಲ ಗ್ರೀನ್ಸ್ ನಲ್ಲಿ ಬಿಳಿ ಕೋಟ್ ಹಾಗೂ ಸ್ಕೆತೋಸ್ಕೋಪ್ ಧರಿಸಿ 5000 ಡಾಕ್ಟರ್‌ಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು, ನಿಟ್ಟೆ ವಿಶ್ವ ವಿದ್ಯಾಲಯದಲ್ಲಿ 3000 ವಿದ್ಯಾರ್ಥಿಗಳು, ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ 3000 ಮಂದಿ ಕಾರ್ಮಿಕರು, ಬೀಡಿನಗುಡ್ಡೆ ಮಹಾತ್ಮಗಾಂಧಿ ಬಯಲು ರಂಗ ಮಂದಿರಲ್ಲಿ ಕಟ್ಟಡ ಕಾರ್ಮಿಕರು, ಉಡುಪಿ ನಗರಸಭೆ, ಮಲ್ಪೆ ಸೈಂಟ್ ಮೇರಿಸ್ ದೀಪ, ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಕಾರ್ಕಳದ ಅತ್ತೂರು ಚರ್ಚ್, ಚತುರ್ಮುಖ ಬಸದಿ, ಗೊಮ್ಮಟಬೆಟ್ಟ, ಆನೆಕೆರೆ ಬಸದಿ, ವರಂಗ ಬಸದಿ, ಕಾಪು ಜೂನಿಯರ್ ಕಾಲೇಜು ಮೈದಾನ, ಬಂಟಕಲ್ ಇಂಜಿನಿಯರ್ ಕಾಲೇಜು, ಕುಂದಾಪುರ ಜೂನಿಯರ್ ಕಾಲೇಜು ಮೈದಾನ, ಬೈಂದೂರು ಗಾಂಧೀ ಮೈದಾನ, ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಗ್ರಂಥಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣ, ಬಸ್ ನಿಲ್ದಾಣ, ಧಾರ್ಮಿಕ
ಕೇಂದ್ರಗಳಲ್ಲಿ, ಬ್ಯಾಂಕ್, ಎಲ್.ಐ.ಸಿ ಕಚೇರಿಗಳಲ್ಲಿ, ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ
ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂನತ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಗಾಯನ ನಡೆಯಲಿದ್ದು, ಕೊನೆಯಲ್ಲಿ ಸಂಕಲ್ಪ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.