ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆಪ್ ತರಬೇತಿ ನೀಡಿ: ಸಚಿವ ಕೆ. ಗೋಪಾಲಯ್ಯ

ಹಾಸನ: ರೈತರಿಗೆ ಸಹಾಯವಾಗುವಂತೆ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಜಾರಿ ಮಾಡಿದ್ದು, ಇದರ ಬಳಕೆ ಬಗ್ಗೆ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
ಅವರು ಇಂದು ಹಾಸನ ತಾಲ್ಲೂಕಿನ ಹೂವಿನ ಹಳ್ಳಿ ಕಾವಲಿನ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಆಪ್ ಮೂಲಕ ಯಾವ ಬೆಳೆ ಬೆಳೆದಿದ್ದಾರೆ ಎಷ್ಟು ಎಕರೆ ಎಷ್ಟು ಕುಂಟೆ ಎಂಬ ಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದರು.
ಮೊಬೈಲ್ ಇಲ್ಲದ ರೈತರ ಹತ್ತಿರ ಆ. 24ರ ನಂತರ ಅಧಿಕಾರಿಗಳು ಭೇಟಿ ನೀಡಿ ಆಪ್ ಮೂಲಕ ಸಮೀಕ್ಷೆ ನಡೆಸಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಪ್ರಕಟಿಸಲಾಗುತ್ತದೆ. ರೈತರು ಮುಂದಿನ ದಿನಗಳಲ್ಲಿ ಮಳೆ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಮತ್ತು ಕಾಲ ಕಾಲಕ್ಕೆ ಬೆಳೆಯುವ ಬೆಳೆಗಳ ಕುರಿತ ಮಾಹಿತಿ ಸಂಗ್ರಹವಿರುತ್ತದೆ. ಇದರಿಂದ ಸರ್ಕಾರಕ್ಕೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ತಮ್ಮ ಜಮೀನಿನ ಮತ್ತು ಬೆಳೆಗಳ ಫೋಟೋವನ್ನು  ರೈತರೇ ಅಪ್ಲೋಡ್ ಮಾಡಬಹುದಾಗಿದೆ. ಆಪ್ ಮೂಲಕ ಸರ್ವೆ ನಂಬರ್ ಖಾತರಿ ಪಡಿಸಿಕೊಂಡು ಎರಡು ರೀತಿಯ ಬೆಳೆ ಬೆಳೆದಿದ್ದಲ್ಲಿ ಅದರ ಪೂರ್ಣ ವಿವರ ದಾಖಲಿಸಿ ಅದಕ್ಕೆ ತಕ್ಕಂತೆ ಫೋಟೋ ಅಪ್ಲೋಡ್ ಮಾಡಬಹುದಾಗಿದೆ ಎಂದರು.
ಸರ್ಕಾರದ ಮುಖ್ಯ ಉದ್ದೇಶವೇನೆಂದರೆ ಜಮೀನಿನ ವಿವರಗಳನ್ನು ರೈತರೇ ದಾಖಲಿಸುವ ಮೂಲಕ ಯಾವುದೇ ತಪ್ಪಾಗದಂತೆ ನಿಗಾವಹಿಸುವುದಾಗಿದೆ.ಈ ಹಿಂದೆ ಇಸ್ಸಾಗಳಲ್ಲಿ ಗೊಂದಲಗಳು ಉಂಟಾಗುತ್ತಿದ್ದು, ಇನ್ನು ಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಬಂದು ತಮ್ಮ ಜಮೀನಿನ ಬೆಳೆಗಳ ವಿವರಗಳನ್ನು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ಮೊಬೈಲ್ ಆಪ್‍ನಲ್ಲಿನ ಮಾಹಿತಿಯ ಮೂಲಕ ರೈತರ ಬೆಳೆ ವಿವರಗಳನ್ನು ಸರ್ಕಾರದ ಮುಂದಿನ ವಿವಿಧ ಯೋಜನೆಗಳಿಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಮೆಕ್ಕೆ ಜೋಳ ಬೆಳೆಗಾರರಿಗೆ 5 ಸಾವಿರ ಸಹಾಯದನ ನೀಡಿದ್ದು, ಅದನ್ನು ಬೆಳೆ ಸಮೀಕ್ಷೆ ಆಧರಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇದೊಂದು ಆನ್ ಲೈನ್ ಆಪ್ ಆಗಿದ್ದು ಜಮೀನಿನ ಬಳಿ ಬಂದಾಗ ಅದರ ಸರ್ವೆ ನಂಬರ್ ತೋರಿಸುತ್ತದೆ ಅದರ ಆಧಾರದ ಮೇಲೆ ಡಾಟ ಎಂಟ್ರಿ ಮಾಡಲಾಗುತ್ತದೆ. ನಷ್ಟ ಪರಿಹಾರಕ್ಕೂ ಸಹ ಇದರ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪ ವಿಭಾಗಾಧಿಕಾರಿ ಡಾ. ನವೀನ್ ಭಟ್, ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಕಾಂತರಾಜು, ಜಂಟಿ ಕೃಷಿ ನಿರ್ದೇಶಕರಾದ ರವಿ ಮತ್ತಿತರರು ಹಾಜರಿದ್ದರು.