ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್ ಮೂಲಕ ರಹಸ್ಯವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಅಯ್ಯಪ್ಪ ಸ್ವಾಮಿ ವಿಗ್ರಹ, ಪವಿತ್ರ 18 ಮೆಟ್ಟಿಲುಗಳು, ಮೇಲ್ತಿರುಮುಟ್ಟಂ ಹಾಗೂ ಮಾಳಿಗಪುರಂ ದೇವಿ ಸನ್ನಿಧಿಯ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಯೂಟ್ಯೂಬ್, ವಾಟ್ಸಾಪ್ಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ದೇವಾಲಯದ ಒಳಭಾಗದಲ್ಲಿ ಚಿತ್ರೀಕರಣಕ್ಕೆ ಕೇರಳ ಹೈಕೋರ್ಟ್ ನಿರ್ಬಂಧ ವಿಧಿಸಿದ್ದರೂ ನಿಯಮ ಉಲ್ಲಂಘನೆ ಮುಂದುವರಿದಿದೆ.
ಕೆಲವು ಯೂಟ್ಯೂಬರ್ಗಳು ಮತ್ತು ವ್ಲಾಗರ್ಗಳು ಮೊಬೈಲ್ಗಳನ್ನು ಶರ್ಟ್ ಕಿಸೆ, ಬ್ಯಾಗ್ ಹಾಗೂ ಹೇರ್ ಬ್ಯಾಂಡ್ಗಳಲ್ಲಿ ಬಚ್ಚಿಟ್ಟು ಚಿತ್ರೀಕರಣ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹವರನ್ನು ಬಂಧಿಸುವುದರ ಜೊತೆಗೆ ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ರಹಸ್ಯವಾಗಿ ಸೆರೆಹಿಡಿದ ದೃಶ್ಯಗಳನ್ನು ಸಮಾಜವಿರೋಧಿ ಹಾಗೂ ಉಗ್ರಗಾಮಿ ಗುಂಪುಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಗುಪ್ತಚರ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಇದೇ ವೇಳೆ, ಈ ಬಾರಿಯ ಶಬರಿಮಲೆ ಯಾತ್ರೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದು ದೇವಸ್ವಂ ಮಂಡಳಿಯ ಚಿಂತೆಗೆ ಕಾರಣವಾಗಿದೆ. ಪಂಪಾ ಮೂಲಕ 59,601 ಭಕ್ತರು ಆಗಮಿಸಿದ್ದು, ವರ್ಚುವಲ್ ಕ್ಯೂ ಬುಕ್ ಮಾಡಿದ್ದವರ ಪೈಕಿ ಸುಮಾರು 47 ಸಾವಿರ ಮಂದಿ ಮಾತ್ರ ದರ್ಶನಕ್ಕೆ ಹಾಜರಾಗಿದ್ದಾರೆ. ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದ ಸುಮಾರು 23 ಸಾವಿರ ಭಕ್ತರು ಆಗಮಿಸಿಲ್ಲ ಎನ್ನಲಾಗಿದೆ.
ಭಕ್ತರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಅನಗತ್ಯ ನಿರ್ಬಂಧಗಳನ್ನು ಸಡಿಲಿಸಿ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಹಾಗೂ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ತಿರುವಾಂಕೂರು ದೇವಸ್ವಂ ನೌಕರರ ಸಂಘಟನೆ ಒತ್ತಾಯಿಸಿದೆ.















