ದೆಹಲಿ: 18 ವರ್ಷ ಮೇಲ್ಪಟ್ಟವರಿಗೆಲ್ಲ ಈಗಾಗಲೇ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಪುಟಾಣಿ ಮಕ್ಕಳಿಗೆ ಇನ್ನೂ ಲಸಿಕೆಗಳನ್ನು ನೀಡಲಾಗಿಲ್ಲ. ಚಿಕ್ಕ ಮಕ್ಕಳಲ್ಲಿ ಕೋವಿಡ್ ವಿರುದ್ದದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸಲಾಗುತ್ತಿದೆ. ಲಸಿಕೆಗಳನ್ನು ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದ್ದು, ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸುವ ಹೊಣೆ ಹೊತ್ತಿದೆ. ಅಮೇರಿಕಾದ ಜೈವಿಕ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ದಿ ಪಡಿಸಿರುವ ನೋವೋವಾಕ್ಸ್ (ಮರುಸಂಯೋಜಕ ನ್ಯಾನೊಪಾರ್ಟಿಕಲ್ ಪ್ರೋಟೀನ್-ಆಧಾರಿತ ಲಸಿಕೆ – NVX-CoV2373) ಲಸಿಕೆಗಳನ್ನು ಭಾರತದಲ್ಲಿ ಕೋವೊವಾಕ್ಸ್ ಹೆಸರಿನಿಂದ ಅಭಿವೃದ್ದಿ ಪಡಿಸಲಾಗುತ್ತಿದೆ.
ಹದಿಹರೆಯದವರ ಮೇಲೆ ನಡೆಸಲಾದ ವೈದ್ಯಕೀಯ ಪರೀಕ್ಷೆಗಳಿಂದ ಇದರ ಸಂಪೂರ್ಣ ಸುರಕ್ಷತೆಯನ್ನು ಕಂಡುಕೊಂಡು ಚಿಕ್ಕ ಮಕ್ಕಳ ಮೇಲೆ ಲಸಿಕೆಗಳ ಪ್ರಯೋಗಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲನೆ ಹಂತದ ಪರೀಕ್ಷೆಗಳು ಮುಗಿದಿದ್ದು, ಎರಡನೇ ಮತ್ತು ಮೂರನೇ ಹಂತದ ಪರೀಕ್ಷೆಗಳಲ್ಲಿ ಎರಡರಿಂದ ಆರು ವರ್ಷ ವಯಸ್ಸಿನ ಮಕ್ಕಳನ್ನು ಸೇರಿಸುವ ಮೂಲಕ ಪೀಡಿಯಾಟ್ರಿಕ್ ಪ್ರಯೋಗವನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಎರಡರಿಂದ ಆರು ವರ್ಷ ವಯಸ್ಸಿನ 230 ಮಕ್ಕಳ ಗುಂಪೊಂದು ಕೋವೊವಾಕ್ಸ್ ಪಡೆದ ದೇಶದ ಅತ್ಯಂತ ಕಿರಿಯ ಗುಂಪು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ತಿಳಿಸಿದೆ. ಮೊದಲನೆ ಡೋಸಿನ 21 ದಿನಗಳ ಬಳಿಕ ಎರಡನೇ ಡೋಸ್ ಅನ್ನು ನೀಡಲಾಗುತ್ತದೆ.
ವರದಿಗಳ ಪ್ರಕಾರ, 10 ಸೈಟ್‌ಗಳಲ್ಲಿ ಮಕ್ಕಳ ಮೇಲೆ ಪ್ರಯೋಗಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಲಸಿಕೆಯ ಎರಡು ಡೋಸ್ ಚುಚ್ಚುಮದ್ದು ನೀಡಲಾದ ನಂತರ ಆರು ತಿಂಗಳ ಕಾಲ ಮಕ್ಕಳ ಮೇಲೆ ನಿಗಾ ಇರಿಸಲಾಗುತ್ತದೆ. ಸೀರಮ್ ಇನ್ಸ್ಟಿಟ್ಯೂಟ್ ನಂತೆಯೆ ಭಾರತ್ ಬಯೋಟೆಕ್ ಸಂಸ್ಥೆಯೂ ಕೂಡಾ ಚಿಕ್ಕ ಮಕ್ಕಳ ಮೇಲೆ ಕೋವಾಕ್ಸಿನ್ ನ ಲಸಿಕಾ ಪ್ರಯೋಗಗಳನ್ನು ವಿಸ್ತರಿಸಿದೆ.
ಎಲ್ಲವೂ ಅಂದುಕೊಂಡತೆಯೆ ಸುಸೂತ್ರವಾಗಿ ನಡೆದಲ್ಲಿ ಜೂನ್ ಅಂತ್ಯದೊಳಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆಗಳು ದೊರೆಯಲಿವೆ. ಕೋವಿಡ್ ರೋಗದ ತೀವ್ರತೆಯನ್ನು ಕಡಿಮೆಗೊಳಿಸಲು ಇರುವ ಒಂದೇ ಒಂದು ವಿಧಾನವೆಂದರೆ ಎಲ್ಲರೂ ಲಸಿಕೆಗಳನ್ನು ತೆಗೆದುಕೊಳ್ಳುವುದು. ಅದರಲ್ಲೂ ಬೊಜ್ಜು, ಮಧುಮೇಹ ಮತ್ತು ಆಸ್ತಮಾ ಮುಂತಾದ ರೋಗ ಲಕ್ಷಣಗಳಿರುವ ಮಕ್ಕಳ ರೋಗನಿರೋಧಕ ಶಕ್ತಿ ತುಂಬಾ ಕ್ಷೀಣವಾಗಿರುವುದರಿಂದ ಕೋವಿಡ್ ಪ್ರಾಣಾಪಾಯಗಳನ್ನು ಒಡ್ಡುವ ಸಾಧ್ಯತೆಗಳಿವೆ. ಮೇ ಅಂತ್ಯದೊಳಗೆ ಪ್ರಯೋಗಾತ್ಮಕ ಪರೀಕ್ಷೆಗಳು ಮುಗಿದು ಜೂನ್ ವರೆಗೆ ಲಸಿಕೆಗಳು ದೊರೆಯಬಹುದು ಎಂದು ಅಂದಾಜು ಮಾಡಲಾಗಿದೆ.