ಶಾಲಾ ಆರಂಭಕ್ಕೆ ದಿನಗಣನೆ, ಸರಕಾರದಿಂದ ಬಂದ Update ಗಳೇನು?

ಬೆಂಗಳೂರು : ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲು ದಿನಗಣನೆ ಆರಂಭವಾಗಿರುವ ನಡುವೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ವರ್ಷದಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಡಿಜಿಟಲ್ ಹಾಜರಿ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಶಾಲಾ ಸುರಕ್ಷತೆ, ಸ್ವಚ್ಛತೆ ಮತ್ತು ದ್ವಿಭಾಷಾ ಬೋಧನಾ ಪದ್ಧತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳ ಸುರಕ್ಷತೆಯನ್ನು ಪರಿಶೀಲಿಸಲು ಇಲಾಖೆ ಸೂಚಿಸಿದೆ. ಶಿಥಿಲಗೊಂಡಿರುವ ಕಟ್ಟಡಗಳು, ಶೌಚಾಲಯಗಳು ಹಾಗೂ ಅಡುಗೆ ಕೋಣೆಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ತಕ್ಷಣ ದುರಸ್ತಿ ಮಾಡಬೇಕು ಅಥವಾ ತೆರವುಗೊಳಿಸಬೇಕು ಎಂದು ಆದೇಶಿಸಲಾಗಿದೆ. ಕುಡಿಯುವ ನೀರು ಹಾಗೂ ಸ್ವಚ್ಛತಾ ವ್ಯವಸ್ಥೆಗಳ ಪರಿಶೀಲನೆಯನ್ನೂ ಕಡ್ಡಾಯಗೊಳಿಸಲಾಗಿದೆ.

6 ರಿಂದ 14 ವರ್ಷದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ವಿಶೇಷ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದೇ ವೇಳೆ, ಇಲಾಖೆಯಿಂದ ಪೂರ್ವಾನುಮತಿ ಪಡೆದ ಶಾಲೆಗಳಲ್ಲಿ ಉರ್ದು-ಇಂಗ್ಲೀಷ್ ದ್ವಿಭಾಷಾ ಶಿಕ್ಷಣ ಪದ್ಧತಿಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ನಿರ್ದೇಶನ ನೀಡಲಾಗಿದೆ.

ಶಾಲಾ ಆರಂಭದ ಸಿದ್ಧತೆಗೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳನ್ನೂ ಪ್ರಕಟಿಸಲಾಗಿದೆ. ಮೇ 28ರೊಳಗೆ ಶಾಲೆಗಳ ಸಂಪೂರ್ಣ ಸ್ವಚ್ಛತೆ ಹಾಗೂ ಸುರಕ್ಷತಾ ತಪಾಸಣೆ ಪೂರ್ಣಗೊಳಿಸಬೇಕು. ಮೇ 29ರಂದು ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವಸಿದ್ಧತೆ ನಡೆಸಬೇಕು. ಜೂನ್ 1ರಂದು ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 30ರಂದು ದಾಖಲಾತಿ ಆಂದೋಲನ ಮುಕ್ತಾಯಗೊಳ್ಳಲಿದೆ.

ಇನ್ನೊಂದೆಡೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ವಿವಿಧ ಭಾಗಗಳಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಿವೆ. ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ. ಪಾಟೀಲ ಅವರು ಶಾಲೆಗೆ ದಾಖಲಾತಿಯಾಗುವ ಪ್ರತಿಯೊಬ್ಬ ಮಗುವಿನ ಹೆಸರಿನಲ್ಲಿ ₹1000 ಮೊತ್ತದ ಎಫ್‌ಡಿ ಇಡುವ ಯೋಜನೆ ಜಾರಿಗೆ ತಂದಿದ್ದು, ಈ ಪ್ರಯತ್ನ ಗಮನ ಸೆಳೆಯುತ್ತಿದೆ.