ಕೊರೊನಾ ನಿಯಮ ಉಲ್ಲಂಘಿಸುವವರಿಗೆ ದುಬಾರಿ ದಂಡ: ಬಿಗಿ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕೊರೊನಾ 2ನೇ ಅಲೆಯ ಆರ್ಭಟ ಹೆಚ್ಚುತ್ತಿದ್ದು, ಹೀಗಾಗಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದುಬಾರಿ ದಂಡಾಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಂತೆ ಬಿಗಿ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಾಸ್ಕ್‌ ಧರಿಸದಿದ್ದರೆ ₹250 ದಂಡ:
ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ₹ 100 ದಂಡ ವಿಧಿಸಲಾಗುವುದು. ಬಿಬಿಎಂಪಿ ಮಾರ್ಷಲ್ ಗಳು, ಹೆಡ್ ಕಾನ್ ಸ್ಟೇಬಲ್ ಮತ್ತು ಮೇಲ್ಪಟ್ಟ ಪೊಲೀಸ್ ಅಧಿಕಾರಿ, ಹೆಲ್ತ್ ಇನ್ಸ್ ಪೆಕ್ಟರ್, ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದರೆ 250 ರೂ. ದಂಡ ವಿಧಿಸಲಾಗುತ್ತದೆ.

ಜನ ಸೇರಲು ಮಿತಿ ನಿಗದಿ:

ಮದುವೆ ಸಮಾರಂಭಕ್ಕೆ ತೆರೆದ ಪ್ರದೇಶದಲ್ಲಿ 500 ಜನ, ಒಳಾಂಗಣದಲ್ಲಿ 200 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಹುಟ್ಟಿದ ಹಬ್ಬದ ಆಚರಣೆಗೆ ತೆರೆದ ಸ್ಥಳದಲ್ಲಿ 100 ಜನ, ಒಳಾಂಗಣದಲ್ಲಿ 50 ಜನ, ಅಂತ್ಯಕ್ರಿಯೆಗೆ 50, ಇತರೆ ಕಾರ್ಯಕ್ರಮಗಳಿಗೆ 100 ಜನ, ಧಾರ್ಮಿಕ ಆಚರಣೆಗೆ ತೆರೆದ ಪ್ರದೇಶದಲ್ಲಿ 500 ಜನರ ಮಿತಿ ಸೂಚಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಹಾಗೂ ತಮ್ಮ ಆವರಣದಲ್ಲಿ ಸಾರ್ವಜನಿಕರು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದನ್ನು ಮಾಡದಿದ್ದರೆ ಆಯಾ ಮಾಲಿಕರನ್ನು ಹೊಣೆಯಾಗಿಸಿ ದುಬಾರಿ ದಂಡ ವಿಧಿಸಲಾಗುತ್ತದೆ.

ನಿಯಮ ಉಲ್ಲಂಘಿಸಿದರೆ ₹ 10 ಸಾವಿರ ದಂಡ:
ನಿಯಮ ಉಲ್ಲಂಘನೆಗೆ ಎ.ಸಿ. ರಹಿತ ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆಗಳಿಗೆ ₹5 ಸಾವಿರ,  ಎ.ಸಿ. ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆ, ಬ್ರಾಂಡೆಡ್‌ ಶಾಪ್‌, ಶಾಪಿಂಗ್‌ ಮಾಲ್‌ಗಳಿಗೆ ₹10 ಸಾವಿರ, ಸ್ಟಾರ್‌ ಹೋಟೆಲ್‌, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ ₹ 10 ಸಾವಿರ ಹಾಗೂ ಸಾರ್ವಜನಿಕ ಸಮಾರಂಭ ಅಥವಾ ರಾರ‍ಯಲಿಗಳಲ್ಲಿ ನಿಯಮ ಉಲ್ಲಂಘನೆಯಾದರೆ ಆಯೋಜಕರಿಗೆ ₹10 ಸಾವಿರ ದಂಡ ವಿಧಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.