ರಹಸ್ಯ ಕಾರ್ಯಾಚರಣೆಯಲ್ಲಿ‌ ಹೊರಬಿತ್ತು ಸಚಿವೆ ಶಶಿಕಲಾ ಜೊಲ್ಲೆಯ ‘ಒಂದು ಮೊಟ್ಟೆಯ ಕಥೆ’

ಬೆಂಗಳೂರು: ಸರ್ಕಾರದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಅಪೌಷ್ಠಿಕ ಮಕ್ಕಳಿಗೆ ನೀಡಲಾಗುವ ಮೊಟ್ಟೆ ವಿತರಣೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು,‌ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರದಲ್ಲಿ ತೊಡಗಿರುವ ದೃಶ್ಯಾವಳಿಗಳು ನ್ಯೂಸ್ ಫಸ್ಟ್ ವಾಹಿನಿ ನಡೆಸಿರುವ ಚುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

ಮಾತೃಪೂರ್ಣ ಯೋಜನೆಯ ಮೊಟ್ಟೆ ವಿತರಿಸುವ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟೆಂಡರ್ ಕರೆಯಲು ಸರ್ಕಾರ ನಿರ್ಧರಿಸಿದ್ದು, ಈ ಟೆಂಡರ್ ಅನ್ನು ತಮಗೆ ಬೇಕಾದವರಿಗೆ ನೀಡಲು ಶಶಿಕಲಾ ಜೊಲ್ಲೆ ಮುಂದಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಾಹಿನಿಯ ಚುಟುಕು ಕಾರ್ಯಾಚರಣೆಯ ತಂಡ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಬಳಿಕ ಅವರ ಮೂಲಕ ಸಚಿವೆ ಜೊಲ್ಲೆ ಅವರನ್ನು ಭೇಟಿಯಾಗಿದೆ.

ಅಲ್ಲಿ ಸಚಿವೆಗೆ ತಿಂಗಳಿಗೆ ಒಂದು ಕೋಟಿ‌ ಹಾಗೂ ಶಾಸಕ ಪರಣ್ಣನಿಗೆ 50 ಲಕ್ಷ ನೀಡುವ ಒಪ್ಪಂದ ಆಗಿದ್ದು, ಟೆಂಡರ್ ತಮಗೆ (ಕಾರ್ಯಾಚರಣೆ ತಂಡಕ್ಕೆ) ನೀಡುವ ಕುರಿತು ಸಚಿವೆ ಭರವಸೆಯನ್ನು ಕೊಟ್ಟಿರುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ನಡೆದ ಮಾತುಕತೆಯಂತೆ ಸಚಿವೆ ನಿಮಗೆ ಟೆಂಡರ್ ಬೇಕಾದರೆ ಹಣಕಾಸು ವ್ಯವಹಾರ ಚಿಕ್ಕೋಡಿಯಲ್ಲಿರುವ ಸಹೋದರ ಸಂಜಯ್ ಅರಗಿ ಜೊತೆ ಮಾತನಾಡಿ 25 ಲಕ್ಷ ರೂ. ನೀಡುವಂತೆ ಸೂಚನೆ ಕೊಟ್ಟಿದ್ದಾರೆ. ಅದರಂತೆ ತಂಡವು 25 ಲಕ್ಷ ರೂ. ಕೊಟ್ಟಿರುವ ವಿಡಿಯೋ ಬಿತ್ತರವಾಗಿದೆ.

ಅಂಗನವಾಡಿ ಮೂಲಕ ವಿತರಿಸಲಾಗುವ ಮೊಟ್ಟೆ ಪೂರೈಕೆ ಟೆಂಡರ್ ಗಾಗಿ ಡೀಲ್ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಡೀಲ್ ಗೆ ಒಪ್ಪಿಕೊಂಡಿರುವುದು ಕುಟುಕು ಕಾರ್ಯಾಚರಣೆಯ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಸಂಪುಟ ಸಚಿವೆಯ ಭ್ರಷ್ಟ ಮುಖ ಬಟಾಬಯಲಾಗಿದೆ.