ದುಬೈನಿಂದ ಆಗಮಿಸಿದ ಒಂದು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ದೃಢ: ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ

ಉಡುಪಿ: ದುಬೈನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ ಒಂದು‌ ವರ್ಷದ ಮಗುವಿನಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಮೇ 13ರಂದು ವಿದೇಶದಿಂದ 49 ಮಂದಿ ಜಿಲ್ಲೆಗೆ ಆಗಮಿಸಿದ್ದು, ಇವರನ್ನು ಹೋಟೆಲ್ ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.‌ ಬಳಿಕ ಎಲ್ಲರನ್ನು ಆರೋಗ್ಯ ತಪಾಸಣೆ ಒಳಪಡಿಸಿ, ಕೊರೊನಾ ಪರೀಕ್ಷೆಗಾಗಿ ಎಲ್ಲರ ಗಂಟಲಿನ ದ್ರವದ ಮಾದರಿಯನ್ನು‌ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇಂದು ಎಲ್ಲರ ವರದಿ ಬಂದಿದ್ದು,  49 ಜನರ ಪೈಕಿ ಒಂದು ವರ್ಷದ ಮಗು ಸೇರಿದಂತೆ ಆರು ಮಂದಿಯ ಮಾದರಿಯಲ್ಲಿ ಸೋಂಕು ಇರುವುದು ಖಚಿತಗೊಂಡಿದೆ. ಉಳಿದ 43 ಮಂದಿಯ ವರದಿ ನೆಗೆಟಿವ್ ಬಂದಿದೆ. ಆರು ಮಂದಿ ಪಾಸಿಟಿವ್ ರೋಗಿಗಳನ್ನು ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಇಂದು ಕೊರೊನಾ ಸೋಂಕು ಕಂಡುಬಂದವರಲ್ಲಿ ಮೂವರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸೇರಿದೆ. ಇವರಲ್ಲಿ ಮೂವರು ಕಾಪು, ಇಬ್ಬರು ಉಡುಪಿ ಹಾಗೂ ಒಬ್ಬರು ಕಿರುಮಂಜೇಶ್ವರ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.