ಯಾದಗಿರಿ: ಹತ್ತಿರದ ಮಹಾರಾಷ್ಟ್ರದಿಂದ ಯಾದಗಿರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ವಿದ್ಯಾರ್ಥಿ ಒಟ್ಟಿಗೆ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿದೆ.
ವಿದ್ಯಾರ್ಥಿಯು ಯಾದಗಿರಿ ಸಮೀಪದ ಯಡಳ್ಳಿ ಗ್ರಾಮದವನಾಗಿದ್ದು, ಕಳೆದ ಎರಡು ತಿಂಗಳ ಲಾಕ್ ಡೌನ್ ಸಮಯದಲ್ಲಿ ಈತ ಮಹಾರಾಷ್ಟ್ರದ ಪುಣೆಯಲ್ಲಿ ಸಿಲುಕಿದ್ದನು.
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಈತ ಜೂನ್ 22ರಂದು ರಾಜ್ಯಕ್ಕೆ ಮರಳಿದ್ದು, ಪ್ರಯಾಣದ ಹಿನ್ನೆಲೆ ಜಿಲ್ಲಾಡಳಿತ ವಿದ್ಯಾರ್ಥಿಯನ್ನು ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಿತ್ತು.
ನಂತರ ವಿದ್ಯಾರ್ಥಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಇಂದು ಆತನ ವರದಿಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸೋಂಕಿತ ವಿದ್ಯಾರ್ಥಿಯನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.