ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕೇಂದ್ರಗಳೆಂದರೆ ಮೊದಲಿನಿಂದಲೂ ಅಲರ್ಜಿ

ಕಾರ್ಕಳ: ಕಾರ್ಕಳ ನಗರ ದೇವತೆ ಶ್ರೀ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಸ್ಥಾನದ ಜೀರ್ಣೊಧ್ಧಾರ ಹಾಗೂ ಬ್ರಹ್ಮಕಲಶ ಸಂಕಲ್ಪ ಇಡೀ ಕಾರ್ಕಳದ ಆಸ್ಥಿಕ ಭಕ್ತರ ಸಾಮೂಹಿಕ ಸಂಕಲ್ಪದ ಪ್ರತಿರೂಪವಾಗಿದೆ. ಯಾವುದೇ ಅಡತಡೆಗಳಿಲ್ಲದೆ ಮಂದಿರ ಭವ್ಯವಾಗಿ ನಿರ್ಮಾಣಗೊಂಡಿದೆ.

ರಾಜಕೀಯ ತೆವಳಿಗೋಸ್ಕರ ಕಾಂಗ್ರೆಸ್ ಈಗ ಟೀಕೆ ಮಾಡುತ್ತ ದೇವಸ್ಥಾನದ ನಿರ್ಮಾಣವನ್ನೆ ಪ್ರಶ್ನಿಸುತ್ತಿದೆ, ಇದು ಖಂಡನೀಯ ಎಂದು ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ ಹೇಳಿದ್ದಾರೆ.

ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ದೀರ್ಘ ಕಾಲದಿಂದ ಸಮಸ್ತ ಭಕ್ತರು, ಸಮಿತಿ ಸದಸ್ಯರು ಸಂಕಲ್ಪ ತೊಟ್ಟಿದ್ದರು. ಒಮ್ಮತದಿಂದ ಜೀರ್ಣೊದ್ಧಾರ ಕಾರ್ಯಕ್ಕೆ ಸಮ್ಮತಿ ಪಡೆದು ಎಲ್ಲ ಭಕ್ತರ ನೆರವು ಪಡೆದು ನಿರ್ಮಾಣಗೊಳಿಸಿರುವುದು, ಏಕಾಏಕಿ ಒಂದಿಬ್ಬರು ನಿರ್ಮಿಸಿದಲ್ಲ. ಸರ್ವರ ಸಹಕಾರದಿಂದ ಅತ್ಯಲ್ಪ ಅವಧಿಯಲ್ಲಿ ದೇಗುಲ ಸುಂದರವಾಗಿ ನಿರ್ಮಾಣಗೊಂಡಿದೆ.

ನಿರ್ಮಾಣ ಕಾರ್ಯದ ನಾನಾ ಹಂತದಲ್ಲಿ ಬಿಜೆಪಿ, ಕಾಂಗ್ರೆಸ್ ಇನ್ನಿತರರು ಎನ್ನದೆ ಎಲ್ಲರು ನಿರ್ಮಾಣ ಕಾರ್ಯದಲ್ಲಿ ಕರಸೇವಕರಾಗಿ, ದಾನಿಗಳಾಗಿ ಕೈ ಜೋಡಿಸಿದ್ದಾರೆ. ಎಲ್ಲರ ಜೊತೆ ಚರ್ಚಿಸಿ, ಲೆಕ್ಕಪತ್ರ ಸಹಿತ ನಿರ್ಧಾರಗಳು ಎಲ್ಲರ ಸಮ್ಮುಖದಲ್ಲೆ ಆಗಿರುವಂತದ್ದು. ದೇವಸ್ಥಾನ ನಿರ್ಮಾಣದ ಬಗ್ಗೆ ಎಲ್ಲರಲ್ಲಿ ಸಂತೃಪ್ತಿ ಇದೆ. ಆದರೆ ಇದನ್ನು ಸಹಿಸದ ಕಾಂಗ್ರೆಸ್ ನ ಕೆಲವರು ರಾಜಕೀಯವಾಗಿ ಬಹಳ ಸರಣಿ ಪ್ರಶ್ನೆಗಳನ್ನು ಎತ್ತುತ್ತ ಟೀಕೆ ಮಾಡುತ್ತಿದ್ದಾರೆ.

ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕೇಂದ್ರಗಳೆಂದರೆ ಮೊದಲಿನಿಂದಲೂ ಅಲರ್ಜಿ. ಅದನ್ನೆ ಇಲ್ಲಿ ಮಾರಿಗುಡಿ ದೇಗುಲ ನಿರ್ಮಾಣದಲ್ಲೂ ವ್ಯಕ್ತಪಡಿಸುತ್ತಿದ್ದಾರೆ.

ದೇವಸ್ಥಾನ ನಿರ್ಮಾಣವನ್ನೆ ಪ್ರಶ್ನಿಸುವ ಕಾಂಗ್ರೆಸ್ಸಿನ ಹೀನ ಮನಸ್ಥಿತಿಯನ್ನು ಕ್ಷೇತ್ರದ ಭಕ್ತರು ಇಷ್ಟರಲ್ಲೆ ಅರಿತುಕೊಂಡಿದ್ದಾರೆ. ಇನ್ನು ಮುಂದೆಯೂ ದೇವಸ್ಥಾನಕ್ಕೆ ಸಂಬಂದಿಸಿ ಹಲವು ಅಭಿವೃದ್ದಿ ಕಾರ್ಯಗಳು ಆಗಬೇಕಿದ್ದು ಅದಕ್ಕೆ ಅಡ್ಡಗಾಲು ಹಾಕುವುದಕ್ಕೆಂದೇ ಕಾಂಗ್ರೆಸ್ಸು ಈ ರೀತಿ ವರ್ತಿಸುತ್ತಿದೆ.

ದೇವಸ್ಥಾನದ ನಿರ್ಮಾಣವನ್ನು ರಾಜಕೀಯಗೊಳಿಸಿ, ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರಿಗೆ ತಕ್ಕ ಶಾಸ್ತಿಯೂ ಮುಂದಿನ ದಿನಗಳಲ್ಲಿ ಆಗಲಿದೆ. ದೇವಸ್ಥಾನ ವಿಚಾರದಲ್ಲಿ ವಿರೋಧಗಳನ್ನು ವ್ಯಕ್ತಪಡಿಸುತ್ತಾ ಭಕ್ತರ ನಂಬಿಕೆಯನ್ನೇ ಕಾಂಗ್ರೆಸ್ ಪ್ರಶ್ನಿಸುತ್ತಿರುವುದು ಖಂಡನೀಯವಾದುದು.

ಕಾರ್ಕಳ ಕಾಂಗ್ರೆಸ್ ನ ಹಿಂದೂ ವಿರೋಧಿ ನಿಲುವು ಮತ್ತೆ ಮತ್ತೆ ಈ ಮೂಲಕ ಪ್ರದರ್ಶನಗೊಳ್ಳುತ್ತಿದೆ. ಮತ್ತೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಲ್ಲಿನ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಉಳಿಗಾಲ ಇಲ್ಲದ ಸ್ಥಿತಿ ಎದುರಾಗಬಹುದು ಎಂದರು. ದೇವಸ್ಥಾನ ನಿರ್ಮಾಣದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನ ನಾಯಕ ದೇವಸ್ಥಾನ ನಿರ್ಮಾಣದಲ್ಲಿ ಕರಸೇವಕರಾಗಿ ಕೈ ಜೋಡಿಸಿದ ಕಾಂಗ್ರೆಸ್ಸಿನ ಕಾರ್ಯಕರ್ತರ ಬಳಿ ನಿರ್ಮಾಣ ಹೇಗಾಗಿದೆ, ಬ್ರಹ್ಮಕಲಶ ಎಲ್ಲರ ಸಹಕಾರದಿಂದ ಹೇಗೆ ನಡೆಯಿತು, ಅದರ ಹಿಂದಿನ ಶ್ರಮದ ಕುರಿತು ಕೇಳಿ ತಿಳಿದುಕೊಳ್ಳುವುದು ಸೂಕ್ತ ಎಂದರು. ಮಾರಿಯಮ್ಮ, ಉಚ್ಚಂಗಿ ದೇವರ ಭಕ್ತ ವೃಂದ, ಯಾವತ್ತೂ ಇಂತಹ ಹೀನ ಧೋರಣೆಯ ಕಾಂಗ್ರೆಸ್ಸಿನ ಬಗ್ಗೆ, ಅದರ ನಡವಳಿಕೆಯ ಬಗ್ಗೆ ಸದಾ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.