ಉದಯಪುರ: ಮೂರು ದಿನಗಳ ನವ ಸಂಕಲ್ಪ ಶಿಬಿರದ ಸಮಾರೋಪದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾನುವಾರ ಉದಯಪುರದಲ್ಲಿ ‘ಒಂದು ಕುಟುಂಬ ಒಂದು ಟಿಕೆಟ್’ ಘೋಷಣೆಯನ್ನು ಅಂಗೀಕರಿಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಘೋಷಣೆಯನ್ನು ವಾಚಿಸಿದರು.
ಘೋಷಣೆಯನ್ನು ಓದಿದ ಮಾಕನ್, ಕಾಂಗ್ರೆಸ್ ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ತಲುಪುತ್ತದೆ ಮತ್ತು ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದರು.
ಪಕ್ಷ ಪುನಶ್ಚೇತನಕ್ಕಾಗಿ ಕಾಂಗ್ರೆಸ್ ಪಕ್ಷವು ಮೂರು ಹೊಸ ಇಲಾಖೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮೊದಲನೆಯದ್ದು ಸಾರ್ವಜನಿಕ ಒಳನೋಟ, ಎರಡನೆಯದ್ದು ಚುನಾವಣಾ ನಿರ್ವಹಣೆ ಮತ್ತು ಮೂರನೆಯದಾಗಿ ರಾಷ್ಟ್ರೀಯ ತರಬೇತಿ.
(i) ಸಾರ್ವಜನಿಕ ಒಳನೋಟ ಇಲಾಖೆ: ಇದರಿಂದ ಕಾಂಗ್ರೆಸ್ ನಾಯಕತ್ವವು ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬಹುದು ಮತ್ತು ನೀತಿ ನಿರೂಪಣೆಗಾಗಿ “ತರ್ಕಬದ್ಧ ಪ್ರತಿಕ್ರಿಯೆ” ಅನ್ನು ಪಡೆಯಬಹುದು.
(ii) ರಾಷ್ಟ್ರೀಯ ತರಬೇತಿ: ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸರ್ಕಾರದ ನೀತಿಗಳು, ಸಿದ್ಧಾಂತಗಳು, ದೂರದೃಷ್ಟಿ, ನೀತಿಗಳು ಮತ್ತು ಪ್ರಸ್ತುತ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರ ತರಬೇತಿಯನ್ನು ಪಡೆಯಲು ‘ರಾಷ್ಟ್ರೀಯ ತರಬೇತಿ ಸಂಸ್ಥೆ’ ಸ್ಥಾಪನೆ. ಈ ರಾಷ್ಟ್ರೀಯ ತರಬೇತಿ ಸಂಸ್ಥೆಯನ್ನು ಕೇರಳದ `ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್ ನಿಂದ ಪ್ರಾರಂಭಿಸಲಾಗುವುದು.
(iii) ಚುನಾವಣಾ ನಿರ್ವಹಣಾ ವಿಭಾಗ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಟ್ಟದಲ್ಲಿ ‘ಚುನಾವಣಾ ನಿರ್ವಹಣಾ ವಿಭಾಗ’ವನ್ನು ರಚಿಸುವುದು. ಇದರಿಂದ ಪ್ರತಿ ಚುನಾವಣಾ ತಯಾರಿಯನ್ನು ಪರಿಣಾಮಕಾರಿಯಾಗಿ ಮಾಡಬಹುದು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು ಎಂದು ಘೋಷಣಾ ಪತ್ರವು ಉಲ್ಲೇಖಿಸಿದೆ.