ಕಾಂಗ್ರೆಸ್ ಪಕ್ಷವನ್ನು ಫಿನಾಯಿಲ್ ಹಾಕಿ ತೊಳೆಯಬೇಕಿದೆ: ಸಚಿವ ಅಶ್ವಥ್ ನಾರಾಯಣ್

ಬೈಂದೂರು: ಕಾಂಗ್ರೆಸ್ ಪಕ್ಷವನ್ನು ಫಿನಾಯಿಲ್ ಹಾಕಿ ತೊಳೆಯಬೇಕಿದೆ. ಅವರು ನಮ್ಮ ದೇಶದಲ್ಲಿ ಬೇಡವಾದ ಸಂಸ್ಕೃತಿ, ಬೇಡವಾದ ವಿಚಾರ, ಬೇಡವಾದ ಆಡಳಿತ ಕೊಟ್ಟು, ದೇಶಕ್ಕೆ ಸಮಸ್ಯೆಯಾದ ಪಕ್ಷವಾಗಿದೆ. ಸಂಪೂರ್ಣವಾಗಿ ಕುಟುಂಬ ಆಧಾರಿತವಾಗಿ ಕೆಲಸ ಮಾಡುತ್ತಿರುವ ಪಕ್ಷದ ಎಂದರೆ, ಅದು ಕಾಂಗ್ರೆಸ್ ಪಕ್ಷ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಟೀಕಿಸಿದರು.

ಇಂದು ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ದೇಶಕ್ಕೆ ಪ್ರಸ್ತುತವಲ್ಲ. ಅದು ಜನರ ಪಕ್ಷನೂ ಅಲ್ಲ, ಅದು ಎಲ್ಲೋ ಫಾರಿನ್ ಪಾರ್ಟಿ, ಅದಕ್ಕಾಗಿ ನಮ್ಮ ದೇಶಕ್ಕೆ ಅದು ಅಪ್ರಸ್ತುತ ಎನ್ನುವುದಕ್ಕೆ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ ಎಂದರು.

ಭಾರತೀಯ ಜನತಾ ಪಕ್ಷ ಜನರ ಪರ ಕಡೆ ಕಾಳಜಿ ವಹಿಸುತ್ತೇವೆ. ನಮ್ಮ ತನ, ನಮ್ಮ ಸಂಸ್ಕೃತಿ, ನಮ್ಮ ವಿಚಾರವನ್ನು ಉಳಿಸಿಕೊಳ್ಳುವಲ್ಲಿ ಪಣ ತೊಟ್ಟಿದೆ. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಕುಟುಂಬ ಆಧಾರಿತವಾಗಿದೆ. ಅದು ನಮ್ಮ ದೇಶಕ್ಕೆ ಪ್ರಸ್ತುತವಲ್ಲ, ಅದರ ಸಂಪೂರ್ಣ ನಿರ್ನಾಮ ನಮ್ಮ ಜನಪರ ಕಾರ್ಯಕ್ರಮ ಮೂಲಕ ಆಗಲಿದೆ. ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ಇಂಜಿನಿಯರ್ ವಿರುದ್ಧ ಗರಂ: ಐ.ಟಿ.ಐ ಕಾಲೇಜಿನ ಕಾಮಗಾರಿ ಪರಿವೀಕ್ಷಣೆ ವೇಳೆ, ಕಾಮಗಾರಿ ವಿವರ ಕೇಳಿದಾಗ ಯಾವುದೇ ದಾಖಲೆಯನ್ನು ಹಾಜರುಪಡಿಸದ ಇಂಜಿನಿಯರ್ ವಿರುದ್ದ ಸಚಿವರು ಗರಂ ಆದರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಮೂಲ ಯೋಜನೆಯ ಪ್ರಕಾರ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು ಮಹತ್ವ ಪೂರ್ಣ ಯೋಜನೆಯಾಗಿರುವುದರಿಂದ ಕಾಮಗಾರಿಯಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್, ಬೈಂದೂರ ಐಟಿಐ ಕಾಲೇಜಿನ ಪ್ರಾಂಶುಪಾಲ ಜಗದೀಶ್, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪಕ್ಷದ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು, ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ಮಂಡಲದ ಭಾಗೀರಥಿ ಸುರೇಶ್, ಬೈಂದೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಮಾಲಿನಿ.ಕೆ, ಕಾಮಗಾರಿಯ ಇಂಜಿನಿಯರ್ ಇದ್ದರು.