ಒಂದು ಕಾಲದಲ್ಲಿ ಕಾಂಗ್ರೆಸ್ ನ ಆಡಂಬೊಲವಾಗಿದ್ದ ಕಾರ್ಕಳ ಕ್ಷೇತ್ರ, ಗೋಪಾಲ ಭಂಡಾರಿಯವರ ನಿಧನದ ಬಳಿಕ ಕಾರ್ಕಳದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಂತೆ, ಜನಾನುರಾಗಿ ನಾಯಕನ ಆಸರೆ ಇಲ್ಲದಂತೆ ಅನಾಥ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೊಸ ಅಭ್ಯರ್ಥಿ, ಉದ್ಯಮಿ, ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಮುನಿಯಾಲು ಉದಯ್ ಶೆಟ್ಟಿ ಅವರ ಎಂಟ್ರಿ ಕಾಂಗ್ರೆಸ್ ಗೆ ಹೊಸ ಜೀವ ನೀಡಿದೆ. ಕಾರ್ಕಳ ಮತದಾರನ ಆಂತರಿಕ ಒಲವು ಉದಯ ಕುಮಾರ್ ಶೆಟ್ಟರತ್ತ ಇದೆ? ಎನ್ನುವ ಪ್ರಶ್ನೆಗೆ ಹೌದು ಎನ್ನುವಂತಿದೆ ಕಾರ್ಕಳದ ಚಿತ್ರಣ.ಈ ಸಲವಾದರೂ ಕಾರ್ಕಳದ ಮತದಾರ ಕಾಂಗ್ರೆಸ್ ನ “ಕೈ”ಹಿಡಿಯಲಿದ್ದಾನೆಯೇ ಎನ್ನುವ ಪ್ರಶ್ನೆಗೆ, ಕಾಂಗ್ರೆಸ್ ಕೂಡ ಹೌದು ಎನ್ನುತ್ತಿದೆ. ಯಾಕೆಂದರೆ ಕಾರ್ಕಳ ಕಾಂಗ್ರೆಸ್ ಈಗ ಹೊಸ ಜೋಶ್ ನಲ್ಲಿದೆ. ನದಿಯಂತೆ ತೆಪ್ಪಗಿದ್ದ ಕಾರ್ಕಳ ಕಾಂಗ್ರೆಸ್ ಈಗ ಕಡಲಿನ ಹಾಗೆ ಭೋರ್ಗರೆಯಲು ಶುರುಮಾಡಿದಂತೆ ಕಾಣುತ್ತಿದೆ.
”ಪ್ರತಿಪಕ್ಷ ಇಷ್ಟು ದಿನ ಕಾರ್ಕಳದಲ್ಲಿ ಪ್ರಬಲವಾಗಿರಲಿಲ್ಲ, ಆದರೆ ಈಗ ಜನರಿಗೆ ಒಳ್ಳೆಯ ಆಯ್ಕೆಗಳಿವೆ. ಪ್ರಾಮಾಣಿಕ, ಜನಾನುರಾಗಿ, ಭ್ರಷ್ಟಾಚಾರದ ಗಾಳಿ ಸೋಂಕಿಸಿಕೊಳ್ಳದ ಅಭ್ಯರ್ಥಿಯೇ ನಮ್ಮೂರಿಗೆ ಬೇಕು, ಅಂತಹ ಆಯ್ಕೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ. ಅವರನ್ನೇ ಶಾಸಕರಾಗಿ ನೋಡಲು ಬಯಸುತ್ತೇವೆ ಎನ್ನುವುದು” ಕಾರ್ಕಳದ ಬಹುತೇಕ ಜನರ ಮನದಾಳದ ಮಾತು. ಇಷ್ಟು ದಿನದ ಪ್ರಚಾರ ಕಾರ್ಯದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟರು. ಕಾರ್ಕಳ ಜನತೆಯ ಗಮನ ಸೆಳೆದಿದ್ದು, ಯಾವ ಆಡಂಭರ, ಅಹಂಕಾರ, ಇಲ್ಲದ ವ್ಯಕ್ತಿತ್ವ ಉದಯ ಕುಮಾರ್ ಶೆಟ್ಟರದ್ದು ಎನ್ನುವ ಮಾತು ಕಾರ್ಕಳದ ಜನಸಾಮಾನ್ಯರು ಆಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ತಾನು ಮಾಡಿದ ಕೆಲಸಗಳ ಮೂಲಕ ಜನರಲ್ಲಿ ಮತ ಕೇಳುತ್ತಿದ್ದರೆ, ಉದಯ್ ಕುಮಾರ್ ಶೆಟ್ಟರು ಕಾರ್ಕಳದ ಅಭಿವೃದ್ಧಿಗೆ ನಿಜವಾಗಲೂ ಏನು ಬೇಕು? ಎಲ್ಲರನ್ನೂ ಒಗ್ಗೂಡಿಸಿಕೊಂಡು ಊರೊಂದನ್ನು ಹೇಗೆ ಅಭಿವೃದ್ದಿ ಮಾಡಬಹುದು ಎನ್ನುವುದನ್ನು ಸಾರಿ ಹೇಳಲು ತನಗೊಂದು ಅವಕಾಶ ಕೊಡಿ. ಭ್ರಷ್ಟಮುಕ್ತ, ಭಯಮುಕ್ತ ಸುಂದರ ಕಾರ್ಕಳ ನಿರ್ಮಾಣ ಮಾಡುವುದು ತನ್ನ ಗುರಿ ಎನ್ನುತ್ತಿದ್ದಾರೆ. ಕಾರ್ಕಳ ಜನತೆ ಈ ಕುರಿತು ಯೋಚಿಸಿದಂತೆ ಕಾಣುತ್ತಿದೆ.
ಕಾರ್ಕಳದ ಜನರ ಅಭಿಪ್ರಾಯವನ್ನು ಅಳೆದು ತೂಗಿ ನೋಡುವುದಾದರೆ ಇಲ್ಲಿನ ಜನ ಹೊಸ ನಾಯಕತ್ವದ ಹಂಬಲದಲ್ಲಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವ ಸತ್ಯ. ಹಿಂದುತ್ವ ನಾಯಕ ಪ್ರಮೋದ್ ಮುತಾಲಿಕ್ ಕೂಡ ಕ್ಷೇತ್ರದ ಗಮನ ಸೆಳೆಯುತ್ತಿದ್ದು, ಅವರು ಈಗಾಗಲೇ ಕಾರ್ಕಳ ಬಿಜೆಪಿ ಅವಧಿಯಲ್ಲಾದ ಭ್ರಷ್ಟಾಚಾರ, ಅಣೆಕಟ್ಟು, ಸರಕಾರಿ ಆಸ್ಪತ್ರೆಯ ನಿರ್ವಹಣೆ ವೈಫಲ್ಯಗಳ ಯಶೋಗಾಥೆಗಳನ್ನು ಕಾರ್ಕಳದ ಜನತೆ ಮುಂದೆ ಹಂತ ಹಂತವಾಗಿ ಬಿಚ್ಚಿಟ್ಟಿದ್ದಾರೆ. ಈ ಅಂಶವನ್ನು ಕೂಡ ಕಾರ್ಕಳದ ಮತದಾರ ಎಚ್ಚರದ ಕಣ್ಣುಗಳಿಂದ ಗಮನಿಸುತ್ತಿದ್ದಾನೆ. ತಾನು ಮಾಡಿದ ಅಭಿವೃದ್ಧಿಯನ್ನು ಜನರ ಮುಂದಿಡುತ್ತಿರುವ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಒಂದಷ್ಟು ಜನರನ್ನು ಸೆಳೆಯುತ್ತಿದ್ದರೆ. ಉಳಿದಂತೆ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಶೆಟ್ಟಿ ಮತ್ತು ಪಕ್ಷೇತ್ತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಕೂಡ ಜನತೆಯ ಗಮನ ಸೆಳೆಯುತ್ತಿದ್ದಾರೆ. ಅಂತೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಈ ತ್ರಿಕೋನ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.