10 ಕೆ.ಜಿ ಅಕ್ಕಿ ಬದಲಿಗೆ 5 ಕೆ.ಜಿ ಅಕ್ಕಿ ಕಾಸು; ಕಾಂಗ್ರೆಸ್ ನಿಂದ ಜನತೆಗೆ ದ್ರೋಹ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ’10 ಕೆ.ಜಿ. ಅಕ್ಕಿ ಫ್ರೀ… ಬೇಕಾ ಬೇಡ್ವಾ…’ ಎಂದು ಘಂಟಾಘೋಷವಾಗಿ ಸಾರಿದ್ದ ಸಿ.ಎಂ. ಸಿದ್ದರಾಮಯ್ಯನವರು ಇದೀಗ ರಾಗ ಬದಲಿಸಿ, ಸಚಿವ ಸಂಪುಟ ಸಭೆಯ ತೀರ್ಮಾನದಂತೆ 10 ಕೆ.ಜಿ. ಅಕ್ಕಿಯ ಬದಲಿಗೆ ಕೇವಲ 5 ಕೆ.ಜಿ. ಅಕ್ಕಿಯ ಮೌಲ್ಯವನ್ನು ಪ್ರತೀ ಕೆ.ಜಿ.ಗೆ ರೂ.34ರಂತೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತೇವೆ ಎಂದಿರುವುದು ರಾಜ್ಯದ ಜನತೆಗೆ ಬಗೆದ ದ್ರೋಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಜನತೆಗೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ಸರಕಾರ ಈ ಮೊದಲು ಘೋಷಿಸಿದಂತೆ ನಿಗದಿತ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ ಅಥವಾ ಪ್ರಸಕ್ತ ನಿರ್ಣಯದಂತೆ ಅದರ ಮೌಲ್ಯವನ್ನು ನೀಡಬೇಕಾಗಿದೆ. ಇದೀಗ ಉಚಿತ ಅಕ್ಕಿ ನೀಡುತ್ತಿರುವುದು ಕೇಂದ್ರ ಸರಕಾರ ಮಾತ್ರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಆಸೆಯಿಂದ 5 ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಜನತೆಗೆ ನೀಡಿದ ವಾಗ್ದಾನದಂತೆ ಯಾವುದೇ ಗ್ಯಾರಂಟಿಗಳನ್ನು ಯಥಾವತ್ತಾಗಿ 24 ಗಂಟೆಗಳೊಳಗೆ ಜಾರಿಗೊಳಿಸದೆ, ಇದೀಗ ವಿವಿಧ ಷರತ್ತುಗಳ ಸಹಿತ ಬಣ್ಣ ಬದಲಿಸಿ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ಈ ಸರಕಾರ ಮಾತು ತಪ್ಪಿದ ‘ವಚನ ಭ್ರಷ್ಟ ಸರಕಾರ’ ಎಂದು ಅವರು ತಿಳಿಸಿದ್ದಾರೆ.

ಉಚಿತ ಅಕ್ಕಿ ಗ್ಯಾರಂಟಿಯನ್ನು ಉದ್ದೇಶಪೂರ್ವಕವಾಗಿಯೇ ರಾಜಕೀಯಗೊಳಿಸಿರುವ ಕಾಂಗ್ರೆಸ್, ಕೇಂದ್ರ ಸರಕಾರವನ್ನು ಅನಾವಶ್ಯಕವಾಗಿ ಈ ವಿಚಾರದಲ್ಲಿ ಎಳೆದು ತಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್ಸಿನ ಷಡ್ಯಂತ್ರದ ಭಾಗವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅನ್ನ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರೋನ ಸಂಕಷ್ಟದ ಕಾಲದಿಂದ ದೇಶದ 80 ಕೋಟಿ ಜನತೆಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಿಕೊಂಡು ಬಂದಿದೆ. ಪ್ರಸಕ್ತ ಕೇಂದ್ರ ಸರಕಾರ ರಾಜ್ಯದ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 5 ಕೆ.ಜಿ. ಉಚಿತ ಅಕ್ಕಿ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ತಲಾ 35 ಕೆ.ಜಿ. ಉಚಿತ ಅಕ್ಕಿಯನ್ನು ಪ್ರತೀ ತಿಂಗಳು ವಿತರಿಸುತ್ತಿದ್ದು, ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತೀ ತಿಂಗಳು ತಲಾ 5 ಕೆ.ಜಿ. ಅಕ್ಕಿಯನ್ನು ರಾಜ್ಯದಲ್ಲಿ ಉಚಿತವಾಗಿ ವಿತರಿಸುತ್ತಿರುವುದನ್ನು ಒಪ್ಪಿಕೊಂಡಿರುವುದು ಜಗಜ್ಜಾಹೀರಾಗಿದೆ.

ಎಲ್ಲಿಂದಾದರೂ ಅಕ್ಕಿಯನ್ನು ಖರೀದಿಸಿ, ಉಚಿತ ಅಕ್ಕಿ ವಿತರಣೆ ಗ್ಯಾರಂಟಿಯನ್ನು ಜಾರಿಗೊಳಿಸುತ್ತೇವೆ ಎಂದು ಬೀಗುತ್ತಿದ್ದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯಾಗಿದೆ. ಆದರೂ ರಾಜ್ಯ ಬಿಜೆಪಿಯ ಸಲಹೆ ಮತ್ತು ಹೋರಾಟದ ಎಚ್ಚರಿಕೆಯನ್ನು ಪರಿಗಣಿಸಿ, ರಾಜ್ಯ ಕಾಂಗ್ರೆಸ್ ಸರಕಾರ ಅಕ್ಕಿಯ ಬದಲಿಗೆ ನಗದು ನೀಡಲು ನಿರ್ಧರಿಸಿದರೂ, ಪ್ರಸಕ್ತ ಕೇವಲ ತಲಾ 5 ಕೆ.ಜಿ. ಅಕ್ಕಿಯ ಮೌಲ್ಯ ರೂ.170ರಂತೆ ನೀಡಲು ಮುಂದಾಗಿರುವುದು ವಿಪರ್ಯಾಸ. ಕಾಂಗ್ರೆಸ್ ಗ್ಯಾರಂಟಿ ಕಾರ್ಡಿನಲ್ಲಿ ಘೋಷಿಸಿದಂತೆ, ರಾಜ್ಯ ಸರಕಾರ ತಲಾ 10 ಕೆ.ಜಿ. ಅಕ್ಕಿಯ ಮೌಲ್ಯ ರೂ.340ನ್ನು ವಿತರಿಸುವುದು ನ್ಯಾಯಸಮ್ಮತವಾಗಿದೆ. ವಾಸ್ತವಿಕವಾಗಿ ಜನತೆ ತಮಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಪ್ರತೀ 1 ಕೆ.ಜಿ.ಗೆ ಪ್ರಚಲಿತ ದರ ರೂ.50ರಂತೆ ಪಾವತಿಸಿ ಮಾರುಕಟ್ಟೆಯಿಂದ ಖರೀದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.34ರಂತೆ ನೀಡುವ ರಾಜ್ಯ ಸರಕಾರದ ನಿರ್ಣಯದಿಂದ ಜನತೆಗೆ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.16ರಂತೆ ನಷ್ಟವೆನಿಸುವುದು ವಾಸ್ತವ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚವನ್ನು ಭರಿಸಿ ರಾಜ್ಯಕ್ಕೆ ವಿತರಿಸಿದಾಗ, ಕೇವಲ ರೂ.3ನ್ನು ಭರಿಸಿ, ಕೇಂದ್ರದ ಪಾಲಿನ ವಿಚಾರವನ್ನು ತಿಳಿಸದೆ, ಅನ್ನಭಾಗ್ಯದ ಬಗ್ಗೆ ಭರ್ಜರಿ ಪುಕ್ಕಟೆ ಪ್ರಚಾರ ಪಡೆದಿದ್ದ ಸಿ.ಎಂ. ಸಿದ್ದರಾಮಯ್ಯನವರು, ಅದೇ ಮಾದರಿಯನ್ನು ಮುಂದುವರಿಸುವ ಇರಾದೆಯಿಂದ ಪೂರ್ವಾಪರ ಆಲೋಚಿಸದೆ, ಕೇಂದ್ರದ ಸಲಹೆಯನ್ನೂ ಪಡೆಯದೆ 10 ಕೆ.ಜಿ. ಉಚಿತ ಅಕ್ಕಿ ವಿತರಣೆಯ ಗ್ಯಾರಂಟಿಯನ್ನು ಘೋಷಿಸಿರುವುದೇ ಈ ಎಲ್ಲಾ ಆವಾಂತರಗಳಿಗೆ ಮೂಲ ಕಾರಣವಾಗಿದೆ.

ಬಡವರ ಮೇಲಿನ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದಿಂದ ರಾಜ್ಯದ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ತಲಾ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ಪ್ರತೀ ತಿಂಗಳು ರಾಜ್ಯಕ್ಕೆ ನೀಡುತ್ತಿದ್ದು, ಕೇವಲ ಅಧಿಕಾರದ ಲಾಲಸೆಯಿಂದ ದೂರದರ್ಶಿತ್ವದ ನಿರ್ದಿಷ್ಟ ಯೋಜನೆಗಳಿಲ್ಲದೆ ಬೇಕಾಬಿಟ್ಟಿಯಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ಯಾವುದನ್ನೂ ಯಥಾವತ್ತಾಗಿ ಜಾರಿಗೊಳಿಸದೆ ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ರಾಜ್ಯದ ಜನತೆಯ ಬವಣೆಗೆ ಕಾರಣವಾಗಿದೆ. ಕೇವಲ ಉಚಿತ ಗ್ಯಾರಂಟಿಗಳ ಗೊಂದಲದಲ್ಲೇ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ಬಣ್ಣ ಬದಲಿಸುವ ಗೋಸುಂಬೆತನದ ವರ್ತನೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.