ಚಂಡೀಗಡ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷ ಬಿಡುವುದು ಪಕ್ಕಾ ಆಗಿದ್ದು, ಆ ಮೂಲಕ ಕಾಂಗ್ರೆಸ್ ಮತ್ತೊಬ್ಬ ಪ್ರಮುಖ ನಾಯಕನನ್ನು ಕಳೆದುಕೊಂಡಂತಾಗಿದೆ.
ಎನ್‌ಡಿಟಿವಿ ನಡೆಸಿದ ಸಂದರ್ಶನದಲ್ಲಿ ‘ನಾನು ಕಾಂಗ್ರೆಸ್ ನಲ್ಲಿ ಖಂಡಿತವಾಗಿಯೂ ಉಳಿಯುವುದಿಲ್ಲ’ ಎನ್ನುವ ಮೂಲಕ ಅಮರಿಂದರ್ ಸಿಂಗ್, ಪಕ್ಷ ತೊರೆಯುವುದರ ಕುರಿತು ಸ್ಪಷ್ಟಪಡಿಸಿದ್ದಾರೆ.
ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನನ್ನು ಹೇಗೆ ನಡೆಸಿಕೊಳ್ಳಲಾಗಿದೆ. ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ ಅಧ್ಯಕ್ಷರು ಕರೆ ಮಾಡಿ ರಾಜೀನಾಮೆ ನೀಡಿ ಎಂದರು. ನಾನೇನು ಪ್ರಶ್ನೆಗಳನ್ನು ಕೇಳಲಿಲ್ಲ. ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದೆ. ನನ್ನ ಬಗ್ಗೆ 50 ವರ್ಷಗಳ ಬಳಿಕ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ ನಂಬಿಕೆ ಇಲ್ಲ ಎಂದರ್ಥ. ಹಾಗಾಗಿ ಯಾವ ಕಾರಣಕ್ಕಾಗಿ ಪಕ್ಷದಲ್ಲಿ ಉಳಿಯಲಿ? ಎಂದು ಅಮರಿಂದರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ಆದರೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ನಂಬಿಕೆಯೇ ಇಲ್ಲದಿದ್ದರೆ ಅಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅಮರಿಂದರ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸೇರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ‘ಬಿಜೆಪಿಗೆ ಸೇರುವುದಿಲ್ಲ’ ಎಂದು ಹೇಳಿದ್ದಾರೆ.