ಬೆಳೆ ಹಾನಿ, ಮನೆ ಹಾನಿಗಳ ನಿಖರ ಸಮೀಕ್ಷೆ ನಡೆಸಿ: ಸಚಿವ ಬೊಮ್ಮಾಯಿ ಸೂಚನೆ

ಉಡುಪಿ: ಪ್ರಕೃತಿ ವಿಕೋಪದಿಂದ ಆದ ಮನೆ ಹಾನಿ ಹಾಗೂ ಬೆಳೆ ಹಾನಿಗಳನ್ನು ಸರಿಯಾಗಿ ಸ್ಥಳ ಪರಿಶೀಲನೆ ಮಾಡುವುದರೊಂದಿಗೆ ನಿಖರ ನಷ್ಟವನ್ನು ಅಂದಾಜಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರನಡೆದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕೋವಿಡ್-19 ನಿಯಂತ್ರಣ ಕ್ರಮ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮತ್ತು ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳ ಹಾನಿಯಾಗಿದ್ದು, ಇವುಗಳ ಹಾನಿ ಸಮೀಕ್ಷೆಯನ್ನು ಸರಿಯಾಗಿ ಪ್ರಾಥಮಿಕ ಹಂತದಲ್ಲೇ ಮಾಡಿ ಪರಿಹಾರ ನೀಡಬೇಕು. ಸಮೀಕ್ಷೆ ಸರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು ನದಿ ಪಾತ್ರದಲ್ಲಿ ಮಣ್ಣಿನ ಸವಕಳಿ, ಹಳ್ಳ-ಕೊಳ್ಳಗಳಲ್ಲಿ ನೀರು ಹರಿದು ಎರಡು ಭಾಗದ ಕೃಷಿ ಭೂಮಿ ಹಾನಿ ಸೇರಿದಂತೆ ಕಡಲ ಕೊರೆತೆ ಯಿಂದ ಆದ ನಷ್ಟವನ್ನು ನಿಖರವಾಗಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು.

ಮನೆ ಹಾನಿ ಸಮೀಕ್ಷೆ ಮಾಡುವಾಗ ಶಿಥಿಲಗೊಂಡಿರುವ ಮನೆಗಳು ಸೇರಿದಂತೆ  ಭಾಗಶ: ಹಾಗೂ ಪೂರ್ತಿ ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ ಹಾನಿಯ ನಿಖರತೆ ಆಧಾರಿಸಿ ಮಾನವೀಯತೆಯ ಆಧಾರದ ಮೇಲೆ ಅಂದಾಜಿಸುವ ಕಾರ್ಯವನ್ನುಪಿ.ಡಿ.ಓ ಹಾಗೂ ಗ್ರಾಮ ಲೆಕ್ಕ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಇವುಗಳ ಉಸ್ತುವಾರಿಯನ್ನು ತಹಶೀಲ್ದಾರರು ಹಾಗೂ ಉಪ ವಿಭಾಗ ಅಧಿಕಾರಿಗಳು ನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ 19  ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಮರಣದ  ಸಂಖ್ಯೆ ಯು ಸಹ ಹೆಚ್ಚಾಗುತ್ತಿದೆ. ಈ ಬಗ್ಗೆ  ಅವಶ್ಯ ವಿರುವ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸೋಂಕಿತರಿಗೆ  ಉತ್ತಮ ಚಿಕಿತ್ಸೆ  ನೀಡಬೇಕೆಂದು. ಬೆಡ್ ಗಳ ಕೊರತೆ, ತುರ್ತು ಚಿಕಿತ್ಸೆಗೆ ಅಗತ್ಯ ವಿರುವ ಆಕ್ಸಿಜನ್ ದಾಸ್ತಾನು ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಉಪಕಾರ್ಯ ದರ್ಶಿ ಕಿರಣ್ ಪಡ್ನೇಕರ್ ,ಉಪವಿಭಾಗ ಅಧಿಕಾ ರಾಜು ಇದ್ದರು. ‌