ಹಾಸ್ಯ ಜಗತ್ತಿನ ಹೆಸರಾಂತ ಕಲಾವಿದ ರಾಜು ಶ್ರೀವಾಸ್ತವ್ ಇನ್ನಿಲ್ಲ

ನವದೆಹಲಿ: ಹೆಸರಾಂತ ಹಾಸ್ಯನಟ ರಾಜು ಶ್ರೀವಾಸ್ತವ ಅವರು 58 ನೇ ವಯಸ್ಸಿನಲ್ಲಿ ದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ಇದನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಜಿಮ್ ನಲ್ಲಿ ತಾಲೀಮು ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಅವರನ್ನು ಆಗಸ್ಟ್ 10ರಂದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. 42 ದಿನಗಳ ಕಾಲ ಕೋಮಾದಲ್ಲಿದ್ದ ಅವರು ಬುಧವಾರದಂದು ನಿಧನ ಹೊಂದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಉ.ಪ್ರ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮು.ಮಂ. ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಸೇರಿದಂತೆ ಎಲ್ಲಾ ದೊಡ್ಡ ನಾಯಕರು ಮತ್ತು ಚಲನಚಿತ್ರ ದಿಗ್ಗಜರು ರಾಜು ಶ್ರೀವಾಸ್ತವ್ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ರಾಜು ಶ್ರೀವಾಸ್ತವ ಅವರ ಪತ್ನಿ ಶಿಖಾ ಶ್ರೀವಾಸ್ತವ್, ಪುತ್ರ ಮತ್ತು ಪುತ್ರಿ ದೆಹಲಿ ಏಮ್ಸ್‌ಗೆ ತಲುಪಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಕಾನ್ಪುರದಲ್ಲಿ ನಡೆಸಬೇಕೆ ಅಥವಾ ಮುಂಬೈನಲ್ಲೆ ಎನ್ನುವುದನ್ನು ಕುಟುಂಬದವರು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

ರಾಜು ಶ್ರೀವಾಸ್ತವ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿ 25 ಡಿಸೆಂಬರ್ 1963 ರಂದು ಜನಿಸಿದರು. ಬಾಲ್ಯದಲ್ಲಿ ಅವರ ಹೆಸರು ಸತ್ಯ ಪ್ರಕಾಶ್ ಶ್ರೀವಾಸ್ತವ ಎಂದಾಗಿತ್ತು. ಬಾಲ್ಯದಿಂದಲೂ ಮಿಮಿಕ್ರಿಯಲ್ಲಿ ಆಸಕ್ತಿ ಹೊಂದಿದ್ದ ರಾಜು, ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಎಂಬ ಹಾಸ್ಯ ಕಾರ್ಯಕ್ರಮದಿಂದ ಗುರುತಿಸಲ್ಪರು. ಅಲ್ಲಿಂದ ಮುಂದೆ ಅವರು ಗಜೋಧರ್ ಬೈಯ್ಯಾ ಎನ್ನುವ ಹೆಸರಿನಿಂದ ಗುರುತಿಸಿಕೊಂಡು ದೇಶಾದ್ಯಂತ ಮನೆ ಮಾತಾಗಿದ್ದರು.

ರಾಜಕಾರಣದಲ್ಲಿ ಮೊದಲು ಸಮಾಜವಾದಿ ಪಕ್ಷ, ತದನಂತರ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ರಾಜು, ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2019 ರಲ್ಲಿ ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿಯೂ ಅವರನ್ನು ನಿಯುಕ್ತಿಗೊಳಿಸಲಾಗಿತ್ತು.

ಹಾಸ್ಯಜಗತ್ತಿನ ಹೆಸರಾಂತ ಕಲಾವಿದನ ನಿಧನಕ್ಕೆ ಅಭಿಮಾನಿಗಳು ಶೃದ್ಧಾಂಜಲಿ ಅರ್ಪಿಸುತ್ತಿದ್ದಾರೆ.