ಎಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ: 5 ಲಕ್ಷ ರೂ ಮೌಲ್ಯದ ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಬೆಂಕಿಗಾಹುತಿ

ಪಡುಬಿದ್ರಿ: ಕಣ್ಣಂಗಾರ್ ಬೈಪಾಸ್ ಬಳಿಯ ನಡ್ಸಾಲು ಗ್ರಾಮದ ಸುಶೀಲಾ ಗಾಣಿಗ ಅವರ ಗಾಣಿಗರ ಎಣ್ಣೆ ಮಿಲ್ ನಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಸುಮಾರು 5 ಲಕ್ಷ ರೂ ಗಳಿಗಿಂತಲೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಬೆಂಕಿಗಾಹುತಿಯಾಗಿ ನಷ್ಟವಾಗಿದೆ.

ಮಾಹಿತಿ ತಿಳಿದ ಕೂಡಲೇ ಉಡುಪಿ ಅಗ್ನಿ ಶಾಮಕದಳದವರು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ರಾತ್ರಿ ಮಾಮೂಲಿನಂತೆ ಕೊಬ್ಬರಿ ಒಣಗಿಸಲು ಅಣಿಗೊಳಿಸಿ ಮಿಲ್ ನ ಮಾಲಕರು ಮನೆಗೆ ತೆರಳಿದ್ದಾರೆ. ಮುಂಜಾನೆ ಸ್ಥಳೀಯರು ಅಗ್ನಿ ಅವಘಡದ ಬಗ್ಗೆ ಮಾಲಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮಿಲ್ ನ ಗೋಡೌನ್ ನಲ್ಲಿ ಒಣಗಿದ ಕೊಬ್ಬರಿ ಮತ್ತು ತೆಂಗಿನಕಾಯಿ ತುಂಬಿದ್ದು, ವಿದ್ಯುತ್ ಸ್ಪರ್ಶದಿಂದಾಗಿ ಹೊತ್ತಿ ಉರಿದಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ.