ಜೂನ್ 4 ರಂದು ಕೋಸ್ಟಲ್ ಫಿಲ್ಮ್ ಅವಾರ್ಡ್ ಪ್ರದಾನ ಸಮಾರಂಭ

ಮಂಗಳೂರು: ತುಳು ಸಿನೆಮಾ ರಂಗದ ಕೋಸ್ಟಲ್ ಫಿಲ್ಮ್ ಅವಾರ್ಡ್ ಪ್ರದಾನ ಸಮಾರಂಭ ಜೂನ್ 4 ರಂದು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಸಂದೇಶ್‌ ರಾಜ್‌ ಬಂಗೇರ ಹೇಳಿದರು.

ಅವರು ನಗರದ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

2020ರ ಜನವರಿಯಿಂದ 2022ರ ಡಿಸೆಂಬರ್‌ವರೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಿದ್ದೇವೆ. ಒಟ್ಟು 28 ವರ್ಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಒಟಿಟಿಗಳಲ್ಲಿ ಮಾತ್ರ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸುವುದಿಲ್ಲ. ಜೀವಮಾನ ಸಾಧನೆ ಪ್ರಶಸ್ತಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಹಾಗೂ ವರ್ಸಟೈಲ್‌ ಆ್ಯಕ್ಟರ್‌ ಪ್ರಶಸ್ತಿಯನ್ನೂ ಪ್ರದಾನ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನ ತಾರೆಯರು, ತುಳು ಸಿನಿಮಾ ರಂಗದ ಪ್ರಮುಖ ಕಲಾವಿದರು ಭಾಗವಹಿಸಲಿದ್ದಾರೆ. ತಾರೆಯರೇ ನಡೆಸಿಕೊಡುವ 10 ನೃತ್ಯ ಕಾರ್ಯಕ್ರಮಗಳು ಹಾಗೂ ಪ್ರಕಾಶ್‌ ಮಹಾದೇವನ್‌ ತಂಡವು ನಡೆಸಿಕೊಡುವ ರಸಮಂಜರಿ  ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ ಎಂದರು.

ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತಿತರರು ಉಪಸ್ಥಿತರಿದ್ದರು.