ಮಂಗಳೂರು: ಬರೋಬ್ಬರಿ ಎರಡು ವರ್ಷಗಳ ವಿರಾಮದ ಬಳಿಕ ಕುಡ್ಲದ ಕರಾವಳಿಯ ಎನ್. ಎಂ.ಪಿ.ಟಿ ಬಂದರಿನಲ್ಲಿ ಎರಡೆರಡು ಐಷಾರಾಮಿ ಕ್ರೂಸರ್ ಗಳು ತಂಗಿ ಪ್ರವಾಸೋದ್ಯಮ ಚಟುವಟಿಕೆ ಪುನಃ ಗರಿಗೆದರಿದ ಸೂಚನೆ ನೀಡಿದವು. ನ.28 ರಂದು ಪ್ರಸಕ್ತ ಕ್ರೂಸ್ ಋತುವಿನ ಮೊದಲ ಕ್ರೂಸ್ ಹಡಗು “ಎಮ್.ಎಸ್ ಯುರೋಪ 2” ಬರ್ತ್ ನಂ. 4 ರಲ್ಲಿ ತಂಗಿತ್ತು. ಮಾಲ್ಟಾ (ಯುರೋಪ್) ಧ್ವಜದ ಅಡಿಯಲ್ಲಿ ನೌಕಾಯಾನ ಮಾಡುತ್ತಿದ್ದ ಎಂಎಸ್ ಯುರೋಪಾ 2, ಒಟ್ಟು 271 ಪ್ರಯಾಣಿಕರು ಮತ್ತು 373 ಸಿಬ್ಬಂದಿಗಳನ್ನು ಹೊಂದಿತ್ತು. 224.38 ಮೀ ಉದ್ದ ಮತ್ತು 29.99 ಮೀ ಅಗಲದೊಂದಿಗೆ, 42,830 ಒಟ್ಟು ಟನ್ ಸಾಮರ್ಥ್ಯದ ಹಡಗು 6.3 ಮೀ ಟನ್ ಡ್ರಾಫ್ಟ್ ಹೊಂದಿತ್ತು. ಎಂಎಸ್ ಯುರೋಪಾ 2 ಗೋವಾದ ಮೊರ್ಮುಗೋ ಬಂದರಿನಿಂದ ಆಗಮಿಸಿ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು.
ಇದಾದ ಬಳಿಕ ಡಿ.2 ರಂದು ಪ್ರಸಕ್ತ ಋತುವಿನ ಎರಡನೇ ಕ್ರೂಸ್ ಹಡಗು ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್’ ಬೆಳಿಗ್ಗೆ 7 ಗಂಟೆಗೆ ಆಗಮಿಸಿತ್ತು. ಒಟ್ಟು 686 ಪ್ರಯಾಣಿಕರು ಮತ್ತು 552 ಸಿಬ್ಬಂದಿಯನ್ನು ಹೊತ್ತ ಕ್ರೂಸರ್ ಬರ್ತ್ ಸಂಖ್ಯೆ 04 ರ ಪಕ್ಕದಲ್ಲಿ ಹೊಸ ಮಂಗಳೂರು ಬಂದರಿಗೆ ಆಗಮಿಸಿತ್ತು. ಹಡಗಿನ ಒಟ್ಟು ಉದ್ದ 223.74 ಮೀಟರ್ ಮತ್ತು 55,254 ಒಟ್ಟು ಟನ್ ಸಾಗಾಟ ಸಾಮರ್ಥ್ಯ ಮತ್ತು 7 ಮೀಟರ್‌ಗಳ ಡ್ರಾಫ್ಟ್ ಹೊಂದಿರುವ ಹಡಗು ಕತಾರ್ ಬಂದರಿನಿಂದ ಭಾರತಕ್ಕೆ ಬಂದಿದೆ. ಇಲ್ಲಿಂದ ಮಾಲ್ಡೀವ್ಸ್ ಗೆ ಹೋಗುವ ಈ ಹಡಗು ಮಂಗಳೂರಿಗೆ ಬರುವ ಮೊದಲು ಗೋವಾದ ಮೊರ್ಮುಗೋ ಬಂದರಿನಲ್ಲಿ ತಂಗಿತ್ತು.
ಎನ್‌ಎಂಪಿಎ ಅಧ್ಯಕ್ಷ ಎ.ವಿ. ರಮಣ ಮಂಗಳೂರಿಗೆ ಆಗಮಿಸಿದ ವಿದೇಶೀ ಪ್ರವಾಸಿಗರು ಕರ್ನಾಟಕ ಕರಾವಳಿಯ ಉತ್ತಮ ಅನುಭವವನ್ನು ಪಡೆಯಲು ಆರಾಮದಾಯಕ ಆಗಮನ ಮತ್ತು ತಂಗವಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಕ್ರೂಸ ನಲ್ಲಿ ಬಂದ ಪ್ರಯಾಣಿಕರನ್ನು ಚೆಂಡೆವಾದ್ಯದ ಮೂಲಕ ಸ್ವಾಗತಿಸಿ ಹಿಂತಿರುವಾಗ ಅವರಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಮಂಗಳೂರಿನ ಆಸುಪಾಸಿನ ಪ್ರೇಕ್ಷಣೀಯ ಸ್ಥಳಗಳಾದ ಸಂತ ಅಲೋಶಿಯಸ್, ಕದ್ರಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಉಡುಪಿ ಶ್ರೀಕೃಷ್ಣ ಮಠ, ಕಾರ್ಕಳ ಗೋಮಟೇಶ್ವರ ಪ್ರತಿಮೆ, ಮೂಡುಬಿದಿರೆ ಸಾವಿರ ಕಂಬದ ಬಸದಿ ಸೇರಿದಂತೆ ಇತರ ಪ್ರದೇಶಗಳಿಗೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮನೋರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿದೇಶೀ ಪ್ರವಾಸಿಗರು ಅವಿಭಜಿತ ದ.ಕ ಜಿಲ್ಲೆಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರದ ಅನುಭವವನ್ನು ಸವಿದ ನಂತರ ತಮ್ಮ ಹಡಗುಗಳನ್ನು ಹತ್ತಿ ಗಮ್ಯ ಸ್ಥಾನ ತಲುಪಲಿದ್ದಾರೆ ಎಂದು ಎನ್‌ಎಂಪಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಚಿತ್ರಗಳು: ಎನ್.ಎಂ.ಪಿ.ಎ/ ಟ್ವಿಟರ್