ಕಾಪು: ಫೆ. 4- 5ರಂದು ‘ಕೋಸ್ಟಲ್ ಆಟೋ ಕಾರ್ನಿವಲ್- 2023’ ಸಾಹಸ ಪ್ರದರ್ಶನ ಕಾರ್ಯಕ್ರಮ

ಉಡುಪಿ: ಫೆ. 4 ಮತ್ತು‌ 5ರಂದು ಕಾಪುವಿನಲ್ಲಿ ‘ಕೋಸ್ಟಲ್ ಆಟೋ ಕಾರ್ನಿವಲ್- 2023’ ಸಾಹಸ ಪ್ರದರ್ಶನ ಕಾರ್ಯಕ್ರಮವು ಕಾಪುವಿನ ಪ್ಯಾಲೇಸ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಸುದೀಪ್ ಶೆಟ್ಟಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗೋವಾ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ಮಾಡಲಾಗುತ್ತಿದ್ದ ಆಟೋ ಕಾರ್ನಿವಲ್ ಅನ್ನು ಮೊದಲ ಬಾರಿಗೆ ಕರಾವಳಿಯಲ್ಲಿ ಆಯೋಜಿಸಲಾಗುತ್ತಿದೆ. ಫೆ. 4 ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅವಿಭಜಿತ ಜಿಲ್ಲೆಯ ಸೂಪರ್ ಕಾರು ಮತ್ತು ಬೈಕುಗಳ ಮಾಲಕರು ಇದರಲ್ಲಿ ಭಾಗವಹಿಸಲಿದ್ದಾರೆ. ಭಾರತದ ಹೆಸರಾಂತ ಬೈಕ್ ಸ್ಟಂಟ್ ಮ್ಯಾನ್ ಕೊಯಮತ್ತೂರಿನ ಪದ್ಮಭೂಷಣ್ ಇವರಿಂದ ಸ್ಟಂಟ್ ಶೋ ಹಾಗೂ ಸುರಕ್ಷತೆಯ ಕುರಿತು ಚರ್ಚೆ ನಡೆಯಲಿದೆ ಎಂದರು.

ಇದಾದ ಬಳಿಕ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕಾಲೇಜು ಮಕ್ಕಳಿಗೆ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಇದರ ಜೊತೆಗೆ ಅದಾಗಲೇ ಗುರುತಿಸಿಕೊಂಡಿರುವ ಯೂಟ್ಯೂಬರ್ಸ್ ಮತ್ತು ಹೊಸ ಯೂಟ್ಯೂಬರ್ ಗಳನ್ನು ಒಟ್ಟು ಸೇರಿಸಿ ಯೂಟ್ಯೂಬರ್ಸ್ ಮೀಟ್ ಆಯೋಜಿಸಲಾಗುವುದು. ವಿಂಟೇಜ್ ಬೈಕ್ ಮತ್ತು ಕಾರ್ ಗಳ ಪ್ರದರ್ಶನಗಳಿರಲಿವೆ. ಲೈವ್ ಬ್ಯಾಂಡ್, ಕರಾವಳಿಯ ವಿಶಿಷ್ಟಾಡುಗೆಗಳ ಸ್ಟಾಲ್ ಗಳು ಹಾಗೂ ಉಡುಪಿ ಜಿಲ್ಲೆಯ ಎಲ್ಲ ಅಟೋಮೊಬೈಲ್ ಸಂಸ್ಥೆಗಳ ಆಟೋ ಎಕ್ಸ್ ಪೋ ನಡೆಯಲಿದೆ ಎಂದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಾರ್ವಜನಿಕರಿಗೆ ಬೈಕ್ ಮತ್ತು ಕಾರು ಚಲಾವಣೆಯ ಸಂಸರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. ಕುಟುಂಬವು ವಾರಾಂತ್ಯದಲ್ಲಿ ಜೊತೆಯಾಗಿ ಕಾಲ ಕಳೆಯಲು ಸಹಾಯಕವಾಗುವ ನಿಟ್ಟಿನಲ್ಲಿಯೂ ಆಟೋ ಕಾರ್ನಿವಲ್ ಅನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚೇತನ್ ಶೆಟ್ಟಿ, ಅಕ್ಷಯ ಕುಮಾರ್ ಉಪಸ್ಥಿತರಿದ್ದರು.