ಶುಲ್ಕ ಪಾವತಿಸದ ಮೊಬೈಲ್ ಟವರ್‌ ಗಳ ಮೇಲೆ ದಂಡ ಪ್ರಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ರಾಜ್ಯದಾದ್ಯಂತ ಅಕ್ರಮವಾಗಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿರುವ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಕ್ರಮವಾಗಿ ಟವರ್‌ಗಳನ್ನು ಅಳವಡಿಸಿರುವ ಟೆಲಿಕಾಂ ಸೇವಾ ಪೂರೈಕೆದಾರರಿಗೆ ರಾಜ್ಯ ಸರ್ಕಾರ ದಂಡ ವಿಧಿಸಬೇಕು. ಆ ಮೂಲಕ ರಾಜ್ಯವು 7,000 ಕೋಟಿ ರೂ. ಗಳನ್ನು ಸಂಗ್ರಹಿಸಬಹುದು ಎಂದು ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ಅವರು ಪತ್ರ ಬರೆದ ನಂತರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ಇನ್‌ಸ್ಟಾಲೇಶನ್ ಆಫ್ ನ್ಯೂ ಟೆಲಿಕಮ್ಯುನಿಕೇಷನ್ ಇನ್ಫ್ರಾಸ್ಟ್ರಕ್ಚರ್ ಟವರ್ಸ್ ನಿಯಮಾವಳಿ 2019 ರ ಪ್ರಕಾರ, ಟವರ್ ಅಳವಡಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷ ರೂ., ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50,000 ರೂ., ನಗರ ಪುರಸಭೆ ವ್ಯಾಪ್ತಿಯಲ್ಲಿ 35,000 ರೂ. ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 8.000 ರೂ. ನೀಡಬೇಕಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಸುಮಾರು 8,000 ಟವರ್‌ಗಳು ಇದ್ದು, ರಾಜ್ಯದಾದ್ಯಂತ 48,000 ಇವೆ. ಅವುಗಳಲ್ಲಿ ಹಲವನ್ನು ಇನ್‌ಸ್ಟಾಲೇಷನ್ ಶುಲ್ಕ ಪಾವತಿಸದೆ ಅಳವಡಿಸಲಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಿದೆ. ಹೀಗಾಗಿ, ಇತರೆ ತೆರಿಗೆಯೊಂದಿಗೆ ಟವರ್ ಇನ್‌ಸ್ಟಾಲೇಷನ್ ಶುಲ್ಕವನ್ನು ಸಹ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇತರ ರಾಜ್ಯಗಳಲ್ಲಿ ಮೊಬೈಲ್ ಟವರ್‌ಗಳಿಗೆ 2 ಲಕ್ಷ ರೂ.ವರೆಗೆ ಶುಲ್ಕವನ್ನು ಸಂಗ್ರಹಿಸಲಾಗುತ್ತಿದ್ದು, ಕರ್ನಾಟಕ ಕೂಡ ಈ ಶುಲ್ಕವನ್ನು ಹೆಚ್ಚಿಸಬೇಕು ಎಂದು ರಮೇಶ್ ಬಾಬು ಮನವಿ ಮಾಡಿದ್ದರು.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.