ವಿಜಯಪುರ ಜು.09 : ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು. ದೋಸ್ತಿ ಸರ್ಕಾರ ಪತನಗೊಳ್ಳುವ ಹಂತದಲ್ಲಿದೆ. ರಾಜೀನಾಮೆ ನೀಡಿದ ಶಾಸಕರಿಗೆ ಬಿಜೆಪಿಯಿಂದ ಹಣದ ಆಫರ್ ನೀಡಲಾಗಿದೆ ಎನ್ನುವ ಆರೋಪಕ್ಕೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ಹಣದ ಆಮಿಷ ಒಡ್ಡಿದ್ದಾರೆ ಎನ್ನುವ ಸಿಎಂ ಆರೋಪದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ವಿಜುಗೌಡ ಪಾಟೀಲ್, ನಾನೂ ಜೆಡಿಎಸ್ ನಲ್ಲಿ ಇದ್ದಾಗ  ಕುಮಾರಸ್ವಾಮಿ ನನಗೂ 30 ಕೋಟಿ ರೂ. ಬೇಡಿಕೆ ಇಟ್ಟಿದ್ದರು.

MLC ಮಾಡಲು ನನ್ನ ಕಾರ್ಯಕರ್ತರ ಬಳಿ ಹಣ ನೀಡಬೇಕಾಗುತ್ತದೆ ಎಂದು ಕೇಳಿದ್ದರು. ಕುಮಾರಸ್ವಾಮಿ ಅವರೇನು ಸತ್ಯ ಹರಿಶ್ಚಂದ್ರನಲ್ಲ. ಬಿಜೆಪಿ ನಾಯಕರ ಹೆಸರು ಕೆಡಿಸಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಅಂದು ಸಿಎಂ ಕುಮಾರಸ್ವಾಮಿ ನಮ್ಮ ಕಾರ್ಯಕರ್ತರ ಬಳಿ ಹಣ ಕೇಳಿದ್ದನ್ನು ಕಾಂಗ್ರೆಸ್ ನಾಯಕರೇ ಆಡಿಯೋ ಮಾಡಿ  ಸೀಡಿಯನ್ನೂ ಮಾಡಿದ್ದರು. ಅವರಿಗೆ ನಾಚಿಕೆ ಎನ್ನುವುದೇ ಇಲ್ಲವೆಂದು ವಿಜು ಗೌಡ ಪಾಟೀಲ್ ಹೇಳಿದರು.