ಉಡುಪಿ: ಗ್ರಾಪಂ ಸದಸ್ಯರ ಗಮನಕ್ಕೆ ತಾರದೇ ಏಕಾಏಕಿ ತೆಂಕನಿಡಿಯೂರು ಗ್ರಾಪಂ ಮುಖ್ಯದ್ವಾರವನ್ನು ತೆರವುಗೊಳಿಸಿ ಗೋಡೆ ಕಟ್ಟಿರುವುದರ ವಿರುದ್ಧ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಖ್ಯಾತ್ ಶೆಟ್ಟಿ, ಗ್ರಾಪಂ ಸದಸ್ಯರ ಗಮನಕ್ಕೆ ತಾರದೆ ಹಾಗೂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸದೆ ಏಕಾಏಕಿಯಾಗಿ ಸರ್ಕಾರಿ ರಜಾದಿನದಂದು ಹಲವು ವರ್ಷಗಳಿಂದ ಇದ್ದ ಪಂಚಾಯತ್ ನ ಮುಖ್ಯದ್ವಾರ ತೆರವುಗೊಳಿಸಿರುವುದು ಖಂಡನೀಯ ಎಂದರು.
ಜನರು ಸುಗಮವಾಗಿ ಪ್ರವೇಶಿಸಲು ಇದ್ದ ಮುಖ್ಯದ್ವಾರವನ್ನು ತೆಗೆದು, ಒಂದು ಮೂಲೆಯಲ್ಲಿ ಮುಖ್ಯದ್ವಾರವನ್ನು ನಿರ್ಮಿಸಿದ್ದಾರೆ. ಆ ಮೂಲಕ ಜನರಿಗೆ ತೊಂದರೆ ಕೊಡಲು ಪಂಚಾಯತ್ ಹೊರಟಿದೆ. ಪಂಚಾಯತ್ ನಿರ್ಧಾರದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಈ ಕಾಮಗಾರಿಯ ಬಗ್ಗೆ ಅನುಮಾನ ಮೂಡಿದೆ ಎಂದು ದೂರಿದರು.
ಈ ಕಾರ್ಯದಲ್ಲಿ ಯಾವುದೇ ಪ್ರಭಾವಿಗಳಿದ್ದರೂ ಮೊದಲಿನಂತೆ ಪ್ರವೇಶದ್ವಾರ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಈ ಬಗ್ಗೆ ದೊಡ್ಡಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ನಾಯಕರಾದ ಗೋಪಾಲಕೃಷ್ಣ ಶೆಟ್ಟಿ, ಸುರೇಶ್ ನಾಯಕ್, ಯತೀಶ್ ಕರ್ಕೇರಾ, ಮೀನಾ ಪಿಂಟೊ, ವೆಂಕಟೇಶ್ ಕುಲಾಲ್, ಶರತ್ ಶೆಟ್ಟಿ, ರವಿರಾಜ್, ಅನುಷಾ, ಸತೀಶ್ ನಾಯಕ್, ಸಿಂಪ್ರಿಯಾನ್ ರೊಡ್ರಿಗಸ್, ಪ್ರಥ್ವಿರಾಜ್ ಶೆಟ್ಟಿ, ಮಮತಾ ಜಿ ಶೆಟ್ಟಿ, ಶಶಿಲಾ ಜಿ ಕೊಟ್ಯಾನ್, ಕೃಷ್ಣಾ ಎಸ್ ಅಮೀನ್, ಪ್ರಭಾಕರ ಅಂಚನ್ ನಾರಾಯಣ ಅಂಚನ್, ರೆಹಮಾನ್, ಶಶಿಕಾಂತ್, ಪ್ರದೀಪ್ ಪಾಲನ್,, ಪ್ರದೀಪ್ ಕಾಂಚನ್, ಪ್ರಜ್ವಲ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.